ಬೆಂಗಳೂರು: ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ 2025 ಸೋಮವಾರದಿಂದ ಪ್ರಾರಂಭವಾಗಲಿದ್ದು, ಪ್ರತಿ ವರ್ಷ 2 ದಿನಗಳ ಕಾಲ ನಡೆಸಲಾಗುತ್ತಿದ್ದಂತಹ ಪರಿಷೆಯನ್ನು ಈ ಬಾರಿ 5 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ 2 ದಿನಗಳ ಪರಿಷೆಯನ್ನು 5 ದಿನಗಳಿಗೆ ವಿಸ್ತರಣೆ ಮಾಡಲಾಗಿದ್ದು, ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆಗಳು ನಡೆಯುತ್ತಿವೆ.
ಕಡಲೆ ಕಾಯಿ ಪರಿಷೆ -2024 ರಲ್ಲಿ ಸುಮಾರು 5 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ಯಶಸ್ವಿಯಾಗಿ ನಡೆದಿದೆ. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಪ್ರಸಕ್ತ ವರ್ಷ ದಿನಾಂಕ:17.11.2025 ರಿಂದ ಪ್ರಾರಂಭವಾಗುವ ಐತಿಹಾಸಿಕ ಪ್ರಸಿದ್ಧ ಕಡಲೆಕಾಯಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಲಾಗಿದೆ. ಏತನ್ಮಧ್ಯೆ ಪರಿಷೆ ವೇಳೆ ಸ್ವಚ್ಛತೆ ಸೇರಿದಂತೆ ಉತ್ತಮ ನಿರ್ವಹಣೆಗೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಬಸವನಗುಡಿ ವಾರ್ಡ್ ಸಂಖ್ಯೆ 154 ನಿವಾಸಿಗಳ ಸಂಘದ ಅಧ್ಯಕ್ಷೆ ಸತ್ಯಲಕ್ಷ್ಮಿ ರಾವ್ ಅವರು ಮಾತನಾಡಿ, ಕಸ ಮತ್ತು ದುರ್ವಾಸನೆ ನಿರಂತರ ಸಮಸ್ಯೆಗಳಾಗಿ ಉಳಿದಿವೆ, ಮಾರಾಟಗಾರರು ಸ್ನಾನ ಮಾಡುವುದು ಮತ್ತು ಅಂಗಡಿಗಳಲ್ಲಿ ಉಳಿಯುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಗಣಪತಿ ದೇವಸ್ಥಾನದ ಬಳಿ ಶೌಚಾಲಯ ದುರಸ್ಥಿತಿ ಕುರಿತು ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾರ್ಕಿಂಗ್ ಮತ್ತು ಸಂಚಾರ ಸಮಸ್ಯೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಲಾಗಿ ನಿಲ್ಲಿಸುವುದರಿಂದ ತುರ್ತು ಸಂದರ್ಭಗಳಲ್ಲಿಯೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. 120–124 ಸ್ಥಳಗಳನ್ನು ಹೊಂದಿರುವ ಬಹು-ಹಂತದ ಸೌಲಭ್ಯ ಪಾರ್ಕಿಂಗ್ ಸ್ಥಳಗಳು ಲಭ್ಯವಿದ್ದರೂ, ಹೆಚ್ಚಿನ ಜನದಟ್ಟಣೆಯಿಂದಾಗಿ ಸ್ಥಳಗಳು ಬೇಗನೆ ತುಂಬುತ್ತವೆ. ಹೀಗಾಗಿ ಮತ್ತಷ್ಟು ಪಾರ್ಕಿಂಗ್ ಪ್ರದೇಶಗಳನ್ನು ಗೊತ್ತುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಬ್ಬ ಸ್ಥಳೀಯ ನಿವಾಸಿ ಸುಧೀಂದ್ರ ರಾವ್ ಅವರು ಮಾತನಾಡಿ, ಪ್ರಯಾಣಿಕರು ಯಾವುದೇ ತೊಂದರೆಗಳನ್ನು ಎದುರಿಸದಂತೆ ಪೊಲೀಸರು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸ್ವಚ್ಛತೆ ಮತ್ತು ಕ್ರಮಬದ್ಧತೆಗೆ ಆದ್ಯತೆ ನೀಡಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಒತ್ತಿ ಹೇಳಿದರು.
ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ಮತ್ತು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವ ಬಗ್ಗೆ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
70 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತೊಬ್ಬ ನಿವಾಸಿ ಕೆ.ಆರ್. ಮೋಹನ್ ಅವರು ಮಾತನಾಡಿ, 5 ದಿನಗಳ ಪರಿಷೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಸರ್ಕಾರ ಸ್ವಚ್ಛ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಆಹಾರ ವ್ಯವಸ್ಥೆಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ.
ಪರಿಷೆ ವೇಳೆ ಸ್ಥಳೀಯ ನಿವಾಸಿಗಳಿಗೆ ಅನಾನುಕೂಲತೆಗಳು ಎದುರಾಗಲಿದೆ. 2 ದಿನಗಳ ಪರಿಷೆ ವೇಳೆ ಈ ಪ್ರದೇಶವು ಸಾಮಾನ್ಯ ಸ್ಥಿತಿಗೆ ಮರಳಲು ಎರಡು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು, ಈಗ ಐದು ದಿನಗಳ ಕಾಲ ಜಾತ್ರೆ ನಡೆಯುತ್ತಿರುವುದರಿಂದ ಈ ಪ್ರದೇಶವು ಸಹಜ ಸ್ಥಿತಿಗೆ ಮರಳಲು 10–15 ದಿನಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.