ಬೆಂಗಳೂರು: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ರೈಲು ಯೋಜನೆ ಈಗ ಅಧಿಕೃತವಾಗಿ ಶುರುವಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಟರ್ ಆಹ್ವಾನಿಸಿದೆ. ಆದರೆ ಇದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ತುಮಕೂರಿಗೆ ಬೆಂಗಳೂರಿಗೆ ವಿಶ್ವ ದರ್ಜೆಯ ಸಂಪರ್ಕ ಬೇಕು. ನಿಸ್ಸಂದೇಹವಾಗಿ. ಆದರೆ ಮೆಟ್ರೋ ಸರಿಯಾದ ಆಯ್ಕೆಯೇ?. ತುಮಕೂರಿಗೆ ಮೆಟ್ರೋ ನಿರ್ಮಿಸುವುದು ನಗರ ಯೋಜನಾ ದುಃಸ್ವಪ್ನ. ಅದನ್ನು ನಿರ್ಮಿಸಲು ಒಳಗೊಂಡಿರುವ ಅತಿಯಾದ ವೆಚ್ಚವು ಅರ್ಥಹೀನವಾಗಿದೆ. ಇದಕ್ಕಾಗಿಯೇ ನಾವು ಉಪನಗರ ರೈಲುಗಳನ್ನು ಹೊಂದಿದ್ದೇವೆ ಎಂದರು.
ದೀರ್ಘಕಾಲದಿಂದ ಬಾಕಿ ಇರುವ ಉಪನಗರ ರೈಲುಗಳನ್ನು ಅಭಿವೃದ್ಧಿಪಡಿಸುವ ಮತ್ತು ತುಮಕೂರಿಗೆ ಸಂಪರ್ಕವನ್ನು ಸುಧಾರಿಸುವ ಬದಲು, ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಹತ್ತಾರು ವರ್ಷಗಳ ನಂತರ ಈಡೇರುವ ಮೆಟ್ರೋ ಯೋಜನೆಗೆ ಡಿಪಿಆರ್ ತಯಾರಿಸಲು ಕೋಟಿಗಟ್ಟಲೆ ಖರ್ಚು ಮಾಡಲು ಬಯಸುತ್ತದೆ. ಅದರ ಬಗ್ಗೆ ಯೋಚಿಸಿ. ಮೆಟ್ರೋದ ಸರಾಸರಿ ಕಾರ್ಯಾಚರಣೆಯ ವೇಗ ಗಂಟೆಗೆ ಸುಮಾರು 34 ಕಿ.ಮೀ ಆಗಿದ್ದು, ಇದು ದೀರ್ಘ ಅಂತರ-ನಗರ ಪ್ರಯಾಣಗಳಿಗೆ ಬಸ್‌ನಂತಿದೆ.
ಕಾಂಗ್ರೆಸ್ ಸರ್ಕಾರ ಪದೇ ಪದೇ ಮೂಲಭೂತ ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದೆ. ಸುರಂಗ ರಸ್ತೆಗಳಿಂದ ಅಂತರ-ನಗರ ಮೆಟ್ರೋ ಪ್ರಸ್ತಾವನೆಗಳವರೆಗೆ, ಈ ಅನಿಯಂತ್ರಿತ ಮತ್ತು ಅಜಾಗರೂಕ ನಿರ್ಧಾರಗಳು ನಾಗರಿಕರಿಗೆ ಮೂಲಭೂತ ನಾಗರಿಕ ಸೌಲಭ್ಯಗಳನ್ನು ನಿರಾಕರಿಸುತ್ತಿವೆ. ಕಾಂಗ್ರೆಸ್ ಶೀಘ್ರದಲ್ಲೇ ಇಂತಹ ತರ್ಕಬದ್ಧವಲ್ಲದ ವಿಚಾರಗಳಿಂದ ಹೊರಬರುತ್ತದೆ ಎಂದು ಆಶಿಸುತ್ತೇವೆ ಎಂದಿದ್ದಾರೆ.
2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆ ಕಾರ್ಯಗತಗೊಂಡರೆ ಇದು ರಾಜ್ಯದ ಮೊದಲ ಇಂಟರ್-ಸಿಟಿ ಮೆಟ್ರೋ ಯೋಜನೆಯಾಗಲಿದೆ. ಅದಾಗಲೇ ಮಾದವರದವರೆಗೂ ನಮ್ಮ ಮೆಟ್ರೋ ಓಡಾಡುತ್ತಿದೆ. ಅಲ್ಲಿಂದ ತುಮಕೂರುವರೆಗಿನ 59.6 ಕಿಲೋಮೀಟರ್ ಹಸಿರು ಮಾರ್ಗ ವಿಸ್ತರಣೆಗೆ ವಿವರವಾದ DP ತಯಾರಿಗೆ ಟೆಂಡರ್ ಆಹ್ವಾನಿಸಿದೆ. ಅಂದಾಜು ವೆಚ್ಚ 20, 649 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಡಿಪಿಆರ್ ಸಿದ್ಧವಾದ ನಂತರ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರದ ಅನುಮೋದನೆ ಪಡೆಯಬೇಕಿದೆ. ಈ ಮಾರ್ಗದಲ್ಲಿ ಒಟ್ಟು 26 ಎಲೆವೆಟೆಡ್ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.