ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿದೆ. ಪ್ರಸಕ್ತ ಸಾಲಿನ ಮೇಳದಲ್ಲಿ ಒಟ್ಟು 54.15 ಲಕ್ಷ ರೈತರು ಮತ್ತು ಸಾರ್ವಜನಿಕರು ಭೇಟಿ ನೀಡಿದ್ದು, ಮೇಳದಲ್ಲಿ ಹಾಕಲಾಗಿದ್ದ ಮಳಿಗೆಗಳಲ್ಲಿ 4.77 ಕೋಟಿ ರೂ. ವಹಿವಾಟು ನಡೆದಿದೆ ಎಂದು ತಿಳಿದುಬಂದಿದೆ,
ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿನ ಮಳಿಗೆಗಳು, ಪ್ರದರ್ಶನಗಳು ಮತ್ತು ಪ್ರಾತ್ಯಕ್ಷಿಕೆಗಳು ರೈತರು, ಕೃಷಿ ಉತ್ಸಾಹಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸಿದವು.
ಕೊನೆಯ ದಿನವಾದ ಭಾನುವಾರ 'ಸ್ಥಳೀಯ ತಳಿಗಳು ಮತ್ತು ಕೃಷಿ ಪದ್ಧತಿಗಳು' ಕುರಿತು ರೈತರಿಂದ ಚರ್ಚೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ದೆಹಲಿಯ ಐಸಿಎಆರ್ ಮಹಾ ನಿರ್ದೇಶಕ ಡಾ. ಸಂಜಯ್‌ಕುಮಾರ್ ಸಿಂಗ್ ಅವರಿಗೆ ರಾಜ್ಯ ಮಟ್ಟದ ಡಾ.ಎಂ.ಹೆಚ್. ಮರೀಗೌಡ ರಾಷ್ಟ್ರೀಯ ದತ್ತಿ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ಪ್ರಶಸ್ತಿ, ಬಿ.ಆರ್.ಮಂಜುನಾಥ್ ಅವರಿಗೆ ಡಾ.ಎಂ.ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಮತ್ತು ಡಾ. ಆರ್. ದ್ವಾರಕೀನಾಥ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನ ಹೆಚ್.ಎಲ್ ಗೋವಿಂದಪ್ಪರವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಮತ್ತು ಎನ್. ಚೆಲುವರಾಯಸ್ವಾಮಿ ಅವರು, ರೈತರು ಕೇವಲ ಆಹಾರ ಉತ್ಪಾದಕರಲ್ಲ, ಉದ್ಯೋಗ ಸೃಷ್ಟಿಕರ್ತರು ಕೂಡ ಹೌದು ಎಂದು ಹೇಳಿದರು.
ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ರೈತರು ನೇರವಾಗಿ ವಿಜ್ಞಾನಿಗಳನ್ನು ಸಂಪರ್ಕಿಸಿ ತಮ್ಮ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಮೇಳ ಅನುವು ಮಾಡಿಕೊಟ್ಟಿದೆ ಎಂದು ಶ್ಲಾಘಿಸಿದರು.
ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೃಷಿ ಮಾಡಬೇಕು. ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರ ಜೀವನವು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡಬೇಕು. ಮಣ್ಣನ್ನು ರಕ್ಷಿಸೋಣ, ನೀರನ್ನು ಸಂರಕ್ಷಿಸೋಣ ಮತ್ತು ಪರಿಸರ ಸ್ನೇಹಿ ಕೃಷಿಯನ್ನು ಅಭ್ಯಾಸ ಮಾಡೋಣ, ಇದರಿಂದ ಭವಿಷ್ಯದ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ನೀಡುತ್ತೇವೆಂದು ತಿಳಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಕೃಷಿ ಮೇಳವನ್ನು ಕೇವಲ ಕಾರ್ಯಕ್ರಮವಲ್ಲದೆ, ಇದು "ವಿಜ್ಞಾನದ ಹಬ್ಬ" ಎಂದು ಬಣ್ಣಿಸಿದರು. "ರೈತರ ನಗು, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಮತ್ತು ವಿಜ್ಞಾನಿಗಳ ಮಾರ್ಗದರ್ಶನವು ಈ ಮೇಳಕ್ಕೆ ಜೀವ ತುಂಬಿದೆ ಎಂದರು.
750 ಕ್ಕೂ ಹೆಚ್ಚು ಮಳಿಗೆಗಳು ಮತ್ತು ಲಕ್ಷಾಂತರ ಜನರ ಭೇಟಿ ಈ ಮೇಳವು ಕರ್ನಾಟಕದ ಕೃಷಿ ಕ್ಷೇತ್ರದ ಶಕ್ತಿ, ಸಾಮರ್ಥ್ಯ ಮತ್ತು ಭವಿಷ್ಯವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು.