ಬೆಂಗಳೂರು: ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆಟದ ಮೈದಾನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ನೀಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೀದಿ ನಾಯಿಗಳು ಕಂಡುಬರುವ ಸ್ಥಳಗಳ ಪಟ್ಟಿ ಮಾಡುವಂತೆ ನಗರದ ಎಲ್ಲಾ ಐದು ಪಾಲಿಕೆಗಳ ಆಯುಕ್ತರಿಗೆ ಸೂಚೆ ನೀಡಿದೆ.
ಬೀದಿ ನಾಯಿಗಳು ಕಂಡುಬರುವ ಸ್ಥಳಗಳು, ನಾಯಿಗಳ ಸಂಖ್ಯೆ, ಕೈಗೊಂಡಿರುವ ಕ್ರಮ ಮತ್ತು ನೇಮಕ ಮಾಡಲಾದ ನೋಡಲ್ ಅಧಿಕಾರಿಗಳ ಪಟ್ಟಿ ಮಾಡುವಂತೆ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮಾಹಿತಿಗಳು ಬಂದ ಕೂಡಲೇ ನಾಯಿಗಳನ್ನು ಸ್ಥಳಾಂತರಿಸಲು, ಅವುಗಳಿಗೆ ಆಶ್ರಯಗಳ ನಿರ್ಮಾಣ ಕಾರ್ಯಗಳ ತ್ವರಿತಗೊಳಿಸಲಾಗುವುದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿಯಮಗಳನ್ನು ಪಾಲಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದೆಡೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಪ್ರಾಣಿ ಪ್ರಿಯರು ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳ ಸ್ಥಳಾಂತರಿಸುವ ಕುರಿತು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ನ್ಯಾಯಾಲಯದ ತೀರ್ಪು ಬೀದಿ ನಾಯಿಗಳ ಕಡಿತದ ಹೆಚ್ಚಳಕ್ಕೆ ಕಾರಣವಾಗುತ್ತದೆ, ಏಕೆಂದರೆ ಸಮುದಾಯ ನಾಯಿಗಳನ್ನು ಹಿಡಿದು ಆಶ್ರಯ ಮನೆಗಳಿಗೆ ಸ್ಥಳಾಂತರಿಸಿದರೆ. ಹೊಸ ಪ್ರದೇಶಕ್ಕೆ ಬರುವ ಈ ನಾಯಿಗಳು ಆತಂಕ ಮತ್ತು ಭೀತಿಯಿಂದಾಗಿ ಆಹಾರಕ್ಕಾಗಿ ದಾಳಿ ನಡೆಸುವ ಸಾಧ್ಯತೆಗಳಿವೆ.
ಹೊಸ ಸ್ಥಳದಲ್ಲಿ ನಾಯಿಗಳು ಅಲ್ಲಿನ ಮನುಷ್ಯರಿಗೆ ಒಗ್ಗಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಆಕ್ರಮಣಶೀಲತೆಯ ಕಾರಣದಿಂದಾಗಿ ದಾಳಿ ಮಾಡಬಹುದು. ಸಮಸ್ಯೆಗಿರುವ ಒಂದೇ ಪರಿಹಾರವೆಂದರೆ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸುಜಾತಾ ಪ್ರಸನ್ನ ಅವರು ಹೇಳಿದ್ದಾರೆ.
ಪ್ರಾಣಿ ರಕ್ಷಕಿ ಎಸ್‌ಪಿ ಸಿಂಗ್ ಅವರು ಮಾತನಾಡಿ, ಆಶ್ರಯ ತಾಣಗಳನ್ನು ಯಾರು ನಡೆಸುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಕೇವಲ ದಾಖಲೆ ಉದ್ದೇಶಗಳಿಗಾಗಿ, ಸೌಲಭ್ಯಗಳನ್ನು ಸ್ಥಾಪಿಸಬಹುದು. ನಾಯಿಗಳನ್ನು ಹಿಂಸಿಸಿ ಕೊಂದರೂ ಕೂಡ ಅದನ್ನು ಮುಚ್ಚಿಹಾಕುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಸರ್ಕಾರ ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ದೊಡ್ಡ ಕ್ಯಾಂಪಸ್‌ಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ನೆಲೆಸಿರುವ ನಾಯಿಗಳನ್ನು ಸ್ಥಳಾಂತರಿಸುವ ಬದಲು, ಅಪಾಯಕಾರಿ ನಾಯಿಗಳನ್ನು ಗುರುತಿಸುವತ್ತ ಗಮನಹರಿಸಬೇಕು. ಸಾಕುಪ್ರಾಣಿಗಳೊಂದಿಗೆ ಸಹಬಾಳ್ವೆ ಮತ್ತು ಅವುಗಳನ್ನು ನೋಡಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ.