ಕೊಪ್ಪಳ: ತನ್ನ ತಂದೆಯೇ ಆತನ ಸ್ನೇಹಿತನಿಗೆ ತನ್ನ ಮೇಲೆ ಪದೇ ಪದೆ ಅತ್ಯಾಚಾರ ಎಸಗುವುದಕ್ಕೆ ಅವಕಾಶ ನೀಡಿದ್ದಾನೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಆರೋಪಿಸಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ನಂತರ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಸಂತ್ರಸ್ತೆಯನ್ನು ಆಕೆಯ ತಾಯಿ ರಕ್ಷಿಸಿದ್ದು, ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ತಿಳಿದಿದೆ.
ಗಂಗಾವತಿಯ ಸಂತ್ರಸ್ತೆ ತನ್ನ ದೂರಿನಲ್ಲಿ, ಮದ್ಯವ್ಯಸನಿಯಾಗಿದ್ದ ತನ್ನ ತಂದೆ ಡಿಸೆಂಬರ್ 8, 2023 ರಂದು ಗುಂಡಮ್ಮ ಕ್ಯಾಂಪ್‌ನಲ್ಲಿರುವ ತನ್ನ ಸ್ನೇಹಿತನ ಮನೆಗೆ ಬಲವಂತವಾಗಿ ಕರೆದೊಯ್ದರು. ತನ್ನನ್ನು ಡಿಸೆಂಬರ್ 13 ರವರೆಗೆ ಅಲ್ಲಿಯೇ ಇರಿಸಲಾಗಿತ್ತು ಎಂದಿದ್ದಾರೆ.
ಡಿಸೆಂಬರ್ 11ರ ರಾತ್ರಿ, ತಂದೆಯ ಸ್ನೇಹಿತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ತನ್ನ ತಂದೆಗೆ ವಿಚಾರ ಹೇಳಲು ಧೈರ್ಯ ಮಾಡಿದಾಗ, ಆತ ಅದನ್ನು ತಳ್ಳಿಹಾಕಿದ್ದಲ್ಲದೆ, ಆರೋಪಿಯೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿದ್ದಾನೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಆಕೆಯ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಸುಮ್ಮನಿರುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಎರಡು ದಿನಗಳ ಹಿಂದೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿಯ ಸಲಹೆಯ ಮೇರೆಗೆ, ಆಕೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.