ಧಾರವಾಡ: ರಾಜ್ಯ ಸರ್ಕಾರ ಖರೀದಿ ಭರವಸೆ ನೀಡಿದ ಬೆನ್ನಲ್ಲೇ ನವಲಗುಂದದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮೆಕ್ಕೆಜೋಳ ರೈತರು ಅಂತ್ಯಗೊಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅಗ್ರಹಿಸಿ ರೈತರು ನಡೆಸುತ್ತಿದ್ದ ಧರಣಿ, ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಉತ್ತರ ಕರ್ನಾಟಕದ ಮೆಕ್ಕೆಜೋಳ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ರೈತರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಕೇಂದ್ರ ಸರ್ಕಾರದ ಅನುಮತಿಯನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ರೈತರ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದ್ದು, ಖರೀದಿ ಕೇಂದ್ರಗಳ ತೆರೆಯುವಲ್ಲಿನ ವಿಳಂಬಕ್ಕೆ ತಾಂತ್ರಿಕ ಕಾರಣಗಳು ಕಾರಣ ಎಂದು ತಿಳಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಸಂಬಂಧಪಟ್ಟ ಇತರ ಸರ್ಕಾರಿ ಅಧಿಕಾರಿಗಳಿಗೆ ರೈತರ ಸಂಕಷ್ಟದ ಬಗ್ಗೆ ತಿಳಿದಿದೆ, ಇದನ್ನು ಸಕಾಲಿಕವಾಗಿ ಪರಿಹರಿಸಲಾಗುವುದು ಎಂದು ಹೇಳಿದರು.