ಬೆಂಗಳೂರು: ಕೇಂದ್ರ ಸರ್ಕಾರ ಗುರುವಾರ ಭಾರತೀಯ ರೈಲ್ವೆ ಸೇವೆಯ ಎಂಜಿನಿಯರ್(ಐಆರ್‌ಎಸ್‌ಇ) ಲಕ್ಷ್ಮಣ್ ಸಿಂಗ್ ಅವರನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ವ್ಯವಸ್ಥಾಪಕ ನಿರ್ದೇಶರಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ.
ಕೆ-ರೈಡ್ ಪ್ರಸ್ತುತ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು(ಬಿಎಸ್‌ಆರ್‌ಪಿ) ನಿರ್ವಹಿಸುತ್ತಿದ್ದು, ಸಂಸ್ಥೆಯ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಯೋಜನೆಗಳು ಆಮೆ ವೇಗದಲ್ಲಿ ಸಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ.
"ಈ ಹುದ್ದೆಗೆ ತಂತ್ರಜ್ಞರನ್ನು ನೇಮಕ ಮಾಡಬೇಕು ಎಂಬ ಬೇಡಿಕೆಯ ನಂತರ ಈ ನೇಮಕಾತಿ ನಡೆದಿದೆ. ಏಕೆಂದರೆ ಈ ಹುದ್ದೆ ಹೆಚ್ಚಿನ ತಾಂತ್ರಿಕ ಪರಿಣತಿಯನ್ನು ಒಳಗೊಂಡಿರುತ್ತದೆ" ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್) ನಲ್ಲಿ ಪ್ರಸ್ತುತ ಮುಖ್ಯ ಜನರಲ್ ಮ್ಯಾನೇಜರ್(ಸಿವಿಲ್) ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ್ ಸಿಂಗ್ ಅವರು ಈಗ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ಸಿಂಗ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶಗಳವರೆಗೆ, ಅವರು ಅಧಿಕಾರದಲ್ಲಿ ಇರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅವರ ಒಟ್ಟು ನಿಯೋಜನೆಯ ಅವಧಿಯನ್ನು ಬಿಎಂಆರ್‌ಸಿಎಲ್‌ನಲ್ಲಿ ಅವರ ಆರಂಭಿಕ ನಿಯೋಜನೆ ದಿನಾಂಕದಿಂದ ಲೆಕ್ಕಹಾಕಲಾಗುತ್ತದೆ ಎಂದು ಅದು ಹೇಳಿದೆ.
ಮೂಲಗಳ ಪ್ರಕಾರ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈ ಕ್ಷೇತ್ರದಲ್ಲಿ ಪರಿಣಿತರನ್ನು ಎಂಡಿ ಆಗಿ ನೇಮಿಸಬೇಕೆಂದು ರೈಲ್ವೆ ಮಂಡಳಿಗೆ ಕೇಳಿಕೊಂಡಿದ್ದರು.
ಕೆ-ರೈಡ್ 2021 ರಲ್ಲಿ ಪೂರ್ಣ ಸಮಯದ ವ್ಯವಸ್ಥಾಪಕ ನಿರ್ದೇಶಕರನ್ನು ಹೊಂದಿತ್ತು. ಅಮಿತ್ ಗರ್ಗ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಅದರ ನಂತರ, ಅನೇಕ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿದ್ದರು.