ಬೆಂಗಳೂರು: ಡಿಜಿಪಿ ಹುದ್ದೆಗೆ ಬಡ್ತಿ ನೀಡುವುದಕ್ಕೆ ತಡೆ ನೀಡಿದ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಹಿರಿಯ ಐಪಿಎಸ್ ಅಧಿಕಾರಿ ಜೆ. ಅರುಣ್ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಚಕ್ರವರ್ತಿ ಅವರನ್ನು ಮುಂದುವರಿಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಬಡ್ತಿ ಬಗ್ಗೆ ಮಾತ್ರ ತಮ್ಮ ದೂರು ಇದ್ದು, ಅದನ್ನು ಸಿಎಟಿ ನಿರ್ಧರಿಸಬೇಕಾಗಿದೆ ಎಂದು ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಹೆಚ್ಚುವರಿ ಡಿಜಿಪಿ ಅಲೋಕ್ ಕುಮಾರ್ ಅವರ ಪರ ವಕೀಲರು ಮಾಡಿದ ವಾದವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರಿದ್ದ ರಜಾ ವಿಭಾಗೀಯ ಪೀಠ ದಾಖಲಿಸಿಕೊಂಡಿತು.
ಚಕ್ರವರ್ತಿ ಸಲ್ಲಿಸಿದ ಅರ್ಜಿಯಲ್ಲಿ, ಸೆಪ್ಟೆಂಬರ್ 18 ರಂದು ಅಲೋಕ್ ಸಲ್ಲಿಸಿದ ಅರ್ಜಿ ಆಲಿಸಿದ ನಂತರ, ಅರ್ಜಿದಾರರು (ಚಕ್ರವರ್ತಿ) ಮತ್ತು ಇನ್ನೊಬ್ಬರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಜೊತೆಗೆ ಪೊಲೀಸ್ ವಸತಿ ನಿಗಮದ ಸಿಎಂಡಿ ಆಗಿಯೂ ನೇಮಿಸಿದ್ದ ಸೆಪ್ಟೆಂಬರ್ 12ರ ಬಡ್ತಿ ಆದೇಶವನ್ನು ಸಿಎಟಿ ತಡೆಹಿಡಿದಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 12ರ ಆದೇಶದ ಹಿನ್ನೆಲೆಯಲ್ಲಿ, ಅರ್ಜಿದಾರರು ಸಿಎಂಡಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರ ಹುದ್ದೆಗೆ ತೊಂದರೆಯಾಗುವ ಸಾಧ್ಯತೆಯಿದೆ ಮತ್ತು ಅವರು ಸಿಎಂಡಿ ಹುದ್ದೆಯಲ್ಲಿ ಮುಂದುವರಿದರೆ ಅಲೋಕ್ ಕುಮಾರ್ ಅವರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುತ್ತಾರೆ ಎಂಬುದು ಅರ್ಜಿದಾರರ ಆತಂಕವಾಗಿದೆ.
ಆದರೆ, ಅರ್ಜಿದಾರರು ಸಿಎಂಡಿಯಾಗಿ ಮುಂದುವರಿಯುವುದಕ್ಕೆ ತಾತ್ವಿಕವಾಗಿ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅಲೋಕ್ ಕುಮಾರ್ ಅವರ ಪರ ವಕೀಲರು ವಾದಿಸಿದರು. ಆದಾಗ್ಯೂ, ಅರ್ಜಿದಾರರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡುವುದನ್ನು ಸಿಎಟಿ ಪರಿಗಣಿಸಬೇಕಾಗುತ್ತದೆ.
ಅರ್ಜಿದಾರರು ಮಧ್ಯಂತರ ಆದೇಶದ ಬಗ್ಗೆ ದೂರು ನೀಡಲು ಬಲವಾದ ಅಥವಾ ಸರಿಯಾದ ಕಾರಣವನ್ನು ಹೊಂದಿಲ್ಲ. ಬಡ್ತಿಯ ವಿಚಾರವನ್ನು CAT ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿದೆ.