ಆಯುಧ ಪೂಜೆ 
ರಾಜ್ಯ

ಇಂದು ನಾಡಿನಾದ್ಯಂತ ಆಯುಧಪೂಜೆ, ಮಹಾನವಮಿ ಸಂಭ್ರಮ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ಬೆಲೆ ಏರಿಕೆ ಮಧ್ಯೆ ಜನರು ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ ಖರೀದಿಸುತ್ತಿದ್ದಾರೆ. ಕೆ.ಆರ್​.ಮಾರುಕಟ್ಟೆಗೆ ಬರುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

ಬೆಂಗಳೂರು: ನವರಾತ್ರಿ ಹಬ್ಬಕ್ಕೆ ಇಂದು ಆಯುಧಪೂಜೆ, ಮಹಾನವಮಿ ನಾಳೆ ವಿಜಯದಶಮಿಯೊಂದಿಗೆ ತೆರೆಬೀಳುತ್ತಿದೆ. ಇಂದು ಎಲ್ಲೆಡೆ ನವರಾತ್ರಿ ಆಯುಧ ಪೂಜೆ ಸಂಭ್ರಮ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಸೇರಿದಂತೆ ಅನೇಕ ಕಡೆಗಳಲ್ಲಿ, ರಾಜ್ಯದ ಹಲವೆಡೆ ಜನರ ಹೂವು, ಹಣ್ಣು, ತರಕಾರಿ ಖರೀದಿ ಭರಾಟೆ ಜೋರಾಗಿದೆ. ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಜೋರಾಗಿದೆ.

ಸಂಚಾರ ದಟ್ಟಣೆ

ಬೆಲೆ ಏರಿಕೆ ಮಧ್ಯೆ ಜನರು ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ ಖರೀದಿಸುತ್ತಿದ್ದಾರೆ. ಕೆ.ಆರ್​.ಮಾರುಕಟ್ಟೆಗೆ ಬರುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟೌನ್ ಹಾಲ್​ನಿಂದ‌ ಕೆ.ಆರ್.ಮಾರುಕಟ್ಟೆವರೆಗೆ ಟ್ರಾಫಿಕ್​ ಜಾಮ್ ಉಂಟಾಗಿದ್ದು, ಫ್ಲೈಓವರ್ ಮೇಲೂ ಸಾರ್ವಜನಿಕರು ವಾಹನ ಪಾರ್ಕ್‌ ಮಾಡಿದ್ದಾರೆ.

ಅಶ್ವಿನಿ ಮಾಸದ 9ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

ಆಯುಧ ಪೂಜೆ ಮಹತ್ವ

ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.

ಆಯುಧ ಪೂಜೆ ವಿಧಾನ

ಆಯುಧ ಪೂಜೆಯ ದಿನದಂದು ಜನರು ತಮ್ಮ ಮನೆ, ಕೆಲಸದ ಸ್ಥಳ, ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಪೂಜೆಗೆ ಅಲಂಕರಿಸುತ್ತಾರೆ. ವ್ಯಾಪಾರ ವರ್ಗದವರು ತಮ್ಮ ವ್ಯಾಪಾರ ಸಲಕರಣೆಗಳಾದ ಕಂಪ್ಯೂಟರ್, ಪೆನ್ನು, ಖಾತೆ ಪುಸ್ತಕ ಇತ್ಯಾದಿಗಳಿಗೆ ಪೂಜೆಯನ್ನು ಮಾಡುತ್ತಾರೆ ಮತ್ತು ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ.

ಆಯುಧ ಪೂಜೆ ಕಥೆ

ಆಯುಧ ಪೂಜೆಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ದುರ್ಗಾದೇವಿಯು ತನ್ನ ರೌದ್ರ ರೂಪದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿರುವ ದಿನವಾಗಿದೆ. ಎಲ್ಲಾ ದೇವತೆಗಳು ರಾಕ್ಷಸನನ್ನು ಸೋಲಿಸಲು ದುರ್ಗೆಗೆ ತಮ್ಮ ಆಯುಧಗಳು, ಪ್ರತಿಭೆ ಮತ್ತು ಶಕ್ತಿಗಳನ್ನು ನೀಡಿದರು. ಸಂಪೂರ್ಣ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಮತ್ತು ನವಮಿಯ ಮುನ್ನಾದಿನದಂದು, ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುವ ಮೂಲಕ ಯುದ್ಧವನ್ನು ಮುಕ್ತಾಯಗೊಳಿಸಿದಳು.

ಹೀಗಾಗಿ, ಆ ದಿನವನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ ಮತ್ತು ಆಯುಧ ಪೂಜೆಯ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ದುರ್ಗಾ ದೇವಿಯು ಬಳಸಿದ ಎಲ್ಲಾ ಆಯುಧಗಳು ಮತ್ತು ಉಪಕರಣಗಳು ತಮ್ಮ ಉದ್ದೇಶವನ್ನು ಸಾಧಿಸಿವೆ ಎನ್ನುವ ನಂಬಿಕೆಯಿದೆ. ಯುದ್ಧದ ನಂತರ ಆ ಆಯುಧಗಳನ್ನು ಗೌರವಿಸಲು ಎಲ್ಲಾ ಆಯುಧಗಳನ್ನು ಪೂಜಿಸಿ ಒಂದೆಡೆ ಇಟ್ಟು ಶುಚಿಗೊಳಿಸಿ ಅಲಂಕರಣ ಮಾಡಿದ ನಂತರ ಆಯಾ ದೇವರು ಮತ್ತು ದೇವತೆಗಳಿಗೆ ಅವುಗಳನ್ನು ಹಿಂದಿರುಗಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ 'ದೊಡ್ಡ ಅವಮಾನ': Donald Trump

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

35ರ ಮಹಿಳೆಯೊಂದಿಗೆ 75 ವರ್ಷದ ವೃದ್ಧನ ಮದುವೆ, ಮೊದಲ ರಾತ್ರಿ ಬೆನ್ನಲ್ಲೇ ಸಾವು!

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

SCROLL FOR NEXT