ಬೆಂಗಳೂರು: ದ್ವೇಷ, ಹಿಂಸೆ, ಅನ್ಯಾಯಗಳ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು ಅವರು ತೋರಿದ ಜೀವಪರ ಚಿಂತನೆಗಳ ಆದರ್ಶದ ಹಾದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮದಿನ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ದ್ವೇಷ, ಹಿಂಸೆ, ಅನ್ಯಾಯಗಳ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು ಅವರು ತೋರಿದ ಜೀವಪರ ಚಿಂತನೆಗಳ ಆದರ್ಶದ ಹಾದಿ. ಜಗತ್ತು ಇಂದಿಗೂ ಭಾರತವನ್ನು ಗಾಂಧಿ ಭಾರತವೆಂದು ಗುರುತಿಸುತ್ತಿರುವುದು ಆ ಸಂತನಿಗೆ ಸಲ್ಲಿಸುತ್ತಿರುವ ಗೌರವ ಎಂದು ಭಾವಿಸಿದ್ದೇನೆ. ಗಾಂಧಿವಾದ ಅಮರವಾಗಲಿ ಎನ್ನುವುದು ನನ್ನ ಹಾರೈಕೆ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪೋಸ್ಟ್ ಮಾಡಿ, ‘ನೀವು ಜಗತ್ತಿನಲ್ಲಿ ಕಾಣಲು ಬಯಸುವ ಬದಲಾವಣೆಯಾಗಿರಿ’ ಸತ್ಯ, ಸರ್ವಧರ್ಮ ಸಮನ್ವಯ ಮತ್ತು ಮಾನವೀಯತೆಯ ಪ್ರತಿರೂಪವಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಗೌರವ ನಮನಗಳು. ಬಾಪೂಜಿಯವರ ಅಹಿಂಸೆಯ ತತ್ವಕ್ಕೆ ಗೌರವಾರ್ಥವಾಗಿ ಆಚರಿಸಲಾಗುವ ವಿಶ್ವ ಅಹಿಂಸಾ ದಿನದ ಸಂದರ್ಭದಲ್ಲಿ, ನಾವು ಅಹಿಂಸೆಯ ಮಾರ್ಗವನ್ನು ಹಿಡಿದು ಶಾಂತಿಯುತ ಮತ್ತು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಸಹಕರಿಸೋಣ. ಅವರ ಚಿಂತನೆಗಳು ಜಗತ್ತಿಗೆ ಸದಾ ಸ್ಪೂರ್ತಿಯಾಗಿರಲಿ ಎಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನೆದು, ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ತಿಳಿಸಿದ್ದಾರೆ.
ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶಕ್ಕೆ ಹೊಸ ದಿಕ್ಕನ್ನು ತೋರಿದ ಸರಳತೆಯ ಸಾಕಾರಮೂರ್ತಿ, ಮಾಜಿ ಪ್ರಧಾನಿ, ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅನಂತ ನಮನಗಳು. ಅವರ ತ್ಯಾಗ, ಪ್ರಾಮಾಣಿಕತೆ ಮತ್ತು ದೃಢ ಸಂಕಲ್ಪ ನಮಗೆ ಸದಾ ಪ್ರೇರಣೆ ಎಂದು ಹೇಳಿದ್ದಾರೆ.