ಧಾರವಾಡ: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ನವೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂಬ ಮಾತುಗಳನ್ನು ಕಾಂಗ್ರೆಸ್ ನಾಯಕರೇ ಆಡುತ್ತಿದ್ದಾರೆ.
ಈ ಮಧ್ಯೆ ರಾಜ್ಯ, ದೇಶದ ಭವಿಷ್ಯ, ರಾಜಕಾರಣಿಗಳ ವಿಚಾರ, ಪ್ರಾಕೃತಿಕ ವಿಕೋಪಗಳ ಬಗ್ಗೆ ಭವಿಷ್ಯ ಹೇಳುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಧಾರವಾಡದಲ್ಲಿ (Dharwad) ಮಾತನಾಡುತ್ತಾ ನುಡಿದಿದ್ದಾರೆ.
ಸಂಕ್ರಾಂತಿವರೆಗೆ ಏನೂ ಹೇಳಲ್ಲ, ಸಿದ್ದರಾಮಯ್ಯ ಸರ್ಕಾರಕ್ಕೆ ಭಯವಿಲ್ಲ. ಉಳಿದದ್ದು ಸಂಕ್ರಾಂತಿ ಆದ ಮೇಲೆ ನೋಡಿ ಹೇಳಬೇಕು ಎಂದಿದ್ದಾರೆ. ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಹೇಳಿದ್ದೆ. ಮಲೆನಾಡು ಬಯಲುಸೀಮೆ ಆಗಿದೆ, ಬಯಲುಸೀಮೆ ಮಲೆನಾಡು ಆಗಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಹಿತಕ್ಕಾಗಿ ನಡೆಯುತ್ತಿವೆ. ದಸರಾದ ನಿಜವಾದ ಅರ್ಥವೆಂದರೆ ದುಷ್ಟ ಶಕ್ತಿಗಳನ್ನು ದೂರವಿಡುವುದಾಗಿದೆ. ಮನುಷ್ಯ ತನ್ನಲ್ಲಿನ ಕೋಪ, ತಾಪ, ಆಸೆಗಳನ್ನು ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತವಾಗಿ ಎಂದು ತಿಳಿಸಿದರು.