ಬೆಂಗಳೂರು: ಮಹಿಳೆಗೆ ಕಿರುಕುಳ ನೀಡಿ, ಆಕೆ ಜೊತೆಗಿನ ಲೈಂಗಿಕ ಕ್ರಿಯೆ ವೀಡಿಯೊಗಳನ್ನು ತನ್ನ ಸ್ನೇಹಿತರಿಗೆ ಶೇರ್ ಮಾಡುತ್ತಿದ್ದ ಆರೋಪದ ಮೇರೆಗೆ ಸೈಯದ್ ಇನಾಮುಲ್ ಹಕ್ (Syed Inam Ul Haq) ಎಂಬಾತನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ವಿಲಕ್ಷಣ ಪ್ರಕರಣ ದಾಖಲಾಗಿದ್ದು, ತನ್ನ ಸ್ವಂತ ಪತ್ನಿ ಜೊತೆಗಿನ ಲೈಂಗಿಕ ಕ್ರಿಯೆಯ ವಿಡಿಯೋಗಳನ್ನು ಸೆರೆ ಹಿಡಿದು ಅದನ್ನು ತನ್ನ ಸ್ನೇಹಿತರೊಂದಿಗೆ ಶೇರ್ ಮಾಡುತ್ತಿದ್ದ ಸೈಕೋ ಪತಿ ಸೈಯದ್ ಇನಾಮುಲ್ ಹಕ್ (Syed Inam Ul Haq) ವಿರುದ್ಧ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, ಪತಿ ಸೈಯದ್ ಇನಾಮುಲ್ ಹಕ್ (Syed Inam Ul Haq) ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯನ್ನು ರಹಸ್ಯವಾಗಿ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಎಂದು ಹೇಳಲಾಗಿದೆ.
ಅಲ್ಲದೆ ಈ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಸೈಯದ್ ಇನಾಮುಲ್ ಹಕ್ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪತಿ ಸೈಯದ್ ವಿರುದ್ಧ ಇದೀಗ ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪತ್ನಿಗೆ "ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ" ನೀಡಿದ ಆರೋಪಗಳ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
35 ವರ್ಷದ ಮಹಿಳೆ ಸೆಪ್ಟೆಂಬರ್ 2024 ರಲ್ಲಿ ಸೈಯದ್ ಇನಾಮ್ ಉಲ್ ಹಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ಮುಸ್ಲಿಂ ಪದ್ಧತಿಗಳ ಪ್ರಕಾರ ವಿವಾಹವಾದರು ಎಂದು ಪೊಲೀಸರು ತಿಳಿಸಿದ್ದಾರೆ.
ರಿಸೆಪ್ಷನ್ ದಿನವೇ ತಲಾಖ್ ನೀಡಿದ್ದ ಭೂಪ!
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆ, 'ಮ್ಯಾರೇಜ್ ಬ್ರೋಕರ್ ಮೂಲಕ ಡಿಸೆಂಬರ್ 15ರಂದು ಸೈಯದ್ ಇನಾಮುಲ್ ಜೊತೆ ಮದುವೆ ಆಗಿದ್ದು, ರಿಸೆಪ್ಷನ್ ನಡೆದ ರಾತ್ರಿಯೇ ಆತ ನನಗೆ ತಲಾಖ್ ನೀಡಿದ್ದ. ಅದಾದ ಬಳಿಕ ತನಗೆ ಹೊಡೆದು ಬಡಿದು ಮಾಡುತ್ತಿದ್ದ ಆರೋಪಿ, ಖಾಸಗಿ ವಿಡಿಯೋಗಳನ್ನ ರೆಕಾರ್ಡ್ ಮಾಡಿ ಬೇರೆಯವರಿಗೆ ಕಳುಹಿಸುತ್ತಿದ್ದ' ಎಂದು ಆರೋಪಿಸಿದ್ದಾರೆ.
ಮದುವೆಯ ಸಮಯದಲ್ಲಿ, ದ್ವಿಚಕ್ರ ವಾಹನ ಮತ್ತು 340 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಮದುವೆಯಾದ ಕೂಡಲೇ, ತಮ್ಮ ಪತಿ ತಾನು ಈಗಾಗಲೇ ಮದುವೆಯಾಗಿದ್ದಾನೆ. ನಾನು ಅವನ ಎರಡನೇ ಹೆಂಡತಿ ಎಂದು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲದೆ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆಂದು ಸಂತ್ರಸ್ಥೆ ದೂರಿದ್ದಾರೆ.
ಸ್ನೇಹಿತರೊಂದಿಗೆ ಮಲಗಲು 'ಪಾಪಿ ಪತಿ' Syed ಒತ್ತಾಯ
ಇನ್ನೂ ಆಘಾತಕಾರಿ ಅಂಶವೆಂದರೆ ಪತಿ ಸೈಯದ್ ತನ್ನ ಸ್ವಾರ್ಥಕ್ಕಾಗಿ ವಿದೇಶದಲ್ಲಿರುವ "ತನ್ನ ಸ್ನೇಹಿತರು ಮತ್ತು ಸಹಚರರೊಂದಿಗೆ ದೈಹಿಕ ಸಂಬಂಧ" ಹೊಂದಲು ತನ್ನ ಮೇಲೆ ಒತ್ತಡ ಹೇರುತ್ತಿದ್ದ. ಅದಕ್ಕೆ ನಿರಾಕರಿಸಿದಾಗ, ತನ್ನೊಂದಿಗಿನ ಲೈಂಗಿಕ ಕ್ರಿಯೆಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ತನ್ನ ಪತಿ ಸಾರ್ವಜನಿಕ ಸ್ಥಳಗಳಲ್ಲಿ, ಹೋಟೆಲ್‌ಗಳಲ್ಲಿ ಮತ್ತು ತನ್ನ ಪೋಷಕರ ಮನೆಯಲ್ಲಿಯೂ ಸಹ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ಪೋಷಕರನ್ನು ಭೇಟಿಯಾಗದಂತೆ ತಡೆಯುತ್ತಿದ್ದ ಎಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಕುಟುಂಬ ಸಮಾರಂಭವೊಂದರಲ್ಲಿ, ತನ್ನ ಗಂಡನ ಸಹೋದರಿ ದೂರಿನಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟ ಮಹಿಳೆ ತನ್ನನ್ನು ಅವಮಾನಿಸಿದ್ದಾಳೆ. ಅಲ್ಲದೆ ಆಕೆಯ ಮಗ ಕೂಡ ತನ್ನೊಂದಿಗೆ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದಾನೆ. ತನ್ನ ಪತಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರ, ಫ್ಲಾಟ್ ಖರೀದಿಸಲು ತನ್ನ ಚಿನ್ನಾಭರಣಗಳನ್ನು ಮಾರಾಟ ಮಾಡುವಂತೆ ತನ್ನ ಪತಿ ತನ್ನ ಮೇಲೆ ಒತ್ತಡ ಹೇರಿದ್ದಾನೆ. ಅದಕ್ಕೆ ನಾನು ನಿರಾಕರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರುದಾರೆ ದೂರಿನಲ್ಲಿ ಆರೋಪಿಸಿದ್ದಾರೆ.
ರೂಮಿನಲ್ಲಿ ರಹಸ್ಯ ಕ್ಯಾಮೆರಾ
ಈ ವರ್ಷದ ಜೂನ್‌ನಿಂದ, ದಂಪತಿಗಳು ವಿನಾಯಕ ನಗರದ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಆರೋಪಿಗಳು ತಮ್ಮ ಮಲಗುವ ಕೋಣೆಯಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ ತನ್ನ ಒಪ್ಪಿಗೆಯಿಲ್ಲದೆ ಪತಿ ಜೊತೆಗಿನ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದಾರೆ.
ಸೆ. 21 ರಂದು, ತನ್ನ ಪತಿ ತಡರಾತ್ರಿ ಮನೆಯಿಂದ ಹೊರಡುವ ಮೊದಲು ತನ್ನೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ. ಇದಾದ ನಂತರವೇ ನಾನು ಪತಿ ಮತ್ತು ಇತರ ಮೂವರು ಕುಟುಂಬ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಸಂಪರ್ಕಿಸಿದ್ದಾಗಿ ಸಂತ್ರಸ್ಥ ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪುಟ್ಟೇನಹಳ್ಳಿ ಪೊಲೀಸರು, "ಆಕೆಯ ದೂರಿನ ಆಧಾರದ ಮೇಲೆ, ನಾವು ಸೆಪ್ಟೆಂಬರ್ 30 ರಂದು ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), 498A (ಮಹಿಳೆಯ ಗಂಡ ಅಥವಾ ಗಂಡನ ಸಂಬಂಧಿ ಅವಳನ್ನು ಕ್ರೌರ್ಯಕ್ಕೆ ಒಳಪಡಿಸುವುದು), 415 (ವಂಚನೆ), 354C (ವಾಯುರಿಸಂ), ಮತ್ತು ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.