ಬೆಂಗಳೂರು: ರಾಜ್ಯ ಸರ್ಕಾರ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ("ಜಾತಿ ಗಣತಿ" ಎಂದೇ ವ್ಯಾಪಕವಾಗಿ ಕರೆಯಲಾಗುತ್ತಿದೆ)ಯ ಅವಧಿಯನ್ನು ವಿಸ್ತರಣೆ ಮಾಡಿದೆ.
ಶಾಲಾ ಶಿಕ್ಷಕರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಕಳೆದ ಸೆಪ್ಟೆಂಬರ್ 22ರಿಂದ ಜಾತಿ ಗಣತಿ ಆರಂಭವಾಗಿದ್ದು,. ಈ ಗಣತಿಗೆ ರಾಜ್ಯ ಸರ್ಕಾರ ಅಕ್ಟೋಬರ್ 7ರಂದು ಡೆಡ್ಲೈನ್ ನೀಡಿತ್ತು. ಆದರೆ ಸರ್ಕಾರಕ್ಕೆ ಕೊಟ್ಟ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸಮೀಕ್ಷೆಯ ಅವಧಿಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 24ರವರೆಗೆ ವಿಸ್ತರಿಸಲಾಗಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿಅಕ್ಟೋಬರ್ 12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ 8 ರಿಂದ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್ 8 ರಿಂದ 24ರ ವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿ ಆಗಬೇಕು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಳ್ಳುವಂತೆ ಆದೇಶಿಸಲಾಗಿದೆ.