ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾದ ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಕೆಜಿಎಫ್ 2 ದಾಖಲೆಯನ್ನು ಹಿಂದಿಕ್ಕಿ ಮುನ್ನುಗುತ್ತಿದೆ. ಆದರೆ ಸಿನಿಮಾ ವೀಕ್ಷಿಸುವಾಗ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿಯಾಗಿದೆ.
ಥಿಯೇಟರ್‌ಗಳಲ್ಲಿ ದೈವದ ವೇಷ ಧರಿಸಿ ಓಡಾಟ, ಚಿತ್ರದಲ್ಲಿ ತೋರಿಸುವ ದೈವದ ವರ್ತನೆಗಳಂತೆ ಚಿತ್ರಮಂದಿರಗಳಲ್ಲಿ ಕಿರುಚಾಡುವುದು ತುಳುವರ ನಂಬಿಕೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಬೆಂಗಳೂರು ತುಳುಕೂಟ ನಟ ರಿಷಬ್ ಶೆಟ್ಟಿಗೆ ಪತ್ರವೊಂದು ಕಳುಹಿಸಿದೆ.
ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.ಹುಚ್ಚಾಟ ಮಾಡುವವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
ಈ ಹಿಂದೆ ಕಾಂತಾರ ಮೊದಲ ಭಾಗ ಬಿಡುಗಡೆಯಾದಾಗಲೂ ಇದೇ ರೀತಿಯ ವರ್ತನೆಗಳು ಕಂಡು ಬಂದಿದ್ದವು, ಆಗಲೂ ತುಳುಕೂಟ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ, ಎಲ್ಲೆಂದರಲ್ಲಿ ದೈವದ ವೇಷ ಧರಿಸಿ, ಅದರ ಅನುಕರಣೆ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿತ್ತು.
ಈಗ ಮತ್ತೆ ಚಾಪ್ಟರ್ 1 ಬಿಡುಗಡೆಯಾಗಿದ್ದು, ಅಂತಹದ್ದೇ ವರ್ತನೆಗಳು ಕಂಡುಬರುತ್ತಿದೆ. ಸದ್ಯ ಈ ಬಗ್ಗೆ ಕಾನೂನು ಸಮರಕ್ಕೆ ಮುಂದಾಗಲು ನಿರ್ಧಾರ ಮಾಡಿರುವ ತುಳುಕೂಟ, ದೈವದ ವೇಷ ಧರಿಸಿ ಹುಟ್ಟಾಟ ಆಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.