ಬೆಂಗಳೂರು: ರಾಮನಗರದ ಬಿಡದಿ ಬಳಿ ನಡೆಯುತ್ತಿದ್ದ ಕನ್ನಡದ ಬಿಗ್ ಬಾಸ್ ಶೋ ಸೀಸನ್ 12 ಸೆಟ್ಗೆ ಬೀಗ ಬಿದ್ದಿದೆ. ಶೋ ಅರ್ಧಕ್ಕೆ ನಿಂತಿದ್ದು, ಸ್ಫರ್ಧಿಗಳನ್ನು ಜಿಲ್ಲಾಡಳಿತ ಸಿಬ್ಬಂದಿ ಹೊರಕಳಿಸಿದ್ದಾರೆ.
ಸದ್ಯದ ಮಟ್ಟಿಗೆ ಸ್ಪರ್ಧಿಗಳನ್ನು ಹತ್ತಿರದ ರೆಸಾರ್ಟ್ನಲ್ಲೇ ಇರಿಸಲಾಗಿದೆ. ಸ್ಟಾರ್ ನಟ ಕಿಚ್ಚ ಸುದೀಪ್ ನಿರೂಪಣೆ ಮಾಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತಡೆ ನೀಡಿದ್ದರ ಬಗ್ಗೆ ಈಗ ಚರ್ಚೆ ನಡೆಯುತ್ತಿದ್ದು ಈ ಹಿಂದೆ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರರ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದ ಮಾತು ತೀವ್ರ ಚರ್ಚೆಗೆ ಬರುತ್ತಿದೆ.
ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಯದಲ್ಲಿ ನಟ್ಟು-ಬೋಲ್ಟ್ ಸಮರ
ಸರ್ಕಾರ-ಸಿನಿಮಾ ರಂಗದ ಸಮರ ಮತ್ತೆ ಮುಂದುವರೆಯಿತಾ ಎನ್ನುವ ಪ್ರಶ್ನೆ ಮೂಡಿದೆ. ಅಂದು ಡಿಸಿಎಂ ಡಿಕೆ ಶಿವಕುಮಾರ್ ಆಡಿದ ನಟ್ಟು-ಬೋಲ್ಟ್ ಹೇಳಿಕೆಯನ್ನು ಅನೇಕ ಕಲಾವಿದರು ಖಂಡಿಸಿದ್ದರು. ಇತ್ತೀಚಿಗಷ್ಟೇ ಬಿಗ್ ಬಾಸ್ ಶೋ ಆರಂಭದ ಪ್ರೆಸ್ಮೀಟ್ ನಲ್ಲೂ ಈ ನಟ್ಟುಬೋಲ್ಟ್ ಹೇಳಿಕೆ ಪ್ರಸ್ತಾಪವಾಗಿತ್ತು. ಸುದೀಪ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ರು. ಇದೀಗ ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಗಕ್ಕೆ ಬೀಗ ಬಿದ್ದಿದ್ದಕ್ಕೆ ಇದೇ ಕಾರಣವಾ ಎಂದು ಜೆಡಿಎಸ್ ಡಿಸಿಎಂ ಅವರನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕುಟುಕಿದೆ.
ಸೇಡು ತೀರಿಸಿಕೊಂಡಿದ್ದು ಡಿಕೆಶಿ?-ಜೆಡಿಎಸ್
ಬಿಗ್ ಬಾಸ್ ಮನೆಗೆ ಬೀಗ ಬೀಳಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ಜೆಡಿಎಸ್ ನೇರವಾಗಿ ಆರೋಪ ಮಾಡುತ್ತಿದೆ. ನಟ್ಟು ಬೋಲ್ಟ್ ವಿಚಾರದ ಸಮರ ಸೇಡು ತೀರಿಸಿಕೊಳ್ಳಲು ಡಿಕೆಶಿಯೇ ಬೀಗ ಹಾಕಿದ್ದಾರೆ ಎನ್ನುವಂತೆ ಜೆಡಿಎಸ್ ಟ್ವೀಟ್ ಮಾಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡರೇ ನಟ್ಟು ಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಎಕ್ಸ್ ಖಾತೆ ಮೂಲಕ ಕಿಡಿಕಾರಿದೆ.