ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ತುಂತುರು ಮಳೆ ಸುರಿಯುತ್ತಿದೆ. ಮಧ್ಯಾಹ್ನದ ನಂತರ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಅಕ್ಟೋಬರ್ 15ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ತುಮಕೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಾಳೆ ಬೆಳಗಿನ ಜಾವದಲ್ಲಿ ಸ್ವಲ್ಪ ಬಿಸಿಲು ಕಂಡುಬಂದರೂ, ಮಧ್ಯಾಹ್ನ 2 ಗಂಟೆಯ ನಂತರ ಅಥವಾ ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಗುಡುಗು ಮತ್ತು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ನಾಳೆ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಪುನಾರಂಭವಾಗಲಿದೆ. ನಾಳೆ ಕೂಡ ಮಳೆಯ ಅಬ್ಬರ ಮುಂದುವರಿಯಲಿದೆ. ಹವಾಮಾನ ಇಲಾಖೆಯ ಪ್ರಕಾರ, ಕರಾವಳಿ ಮತ್ತು ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ.
ಕರಾವಳಿ ಮತ್ತು ಮಲೆನಾಡು: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ನಾಳೆಯೂ ಮಳೆ ಮುಂದುವರಿಯಲಿದ್ದು, ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ 10 ಮಿ.ಮೀ.ಯಿಂದ 30 ಮಿ.ಮೀ.ವರೆಗೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡು: ರಾಮನಗರ, ಚಾಮರಾಜನಗರ, ಕೋಲಾರ, ಹಾಸನ, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾಳೆ ಸಾಧಾರಣ ಮಳೆಯಾಗಲಿದೆ. ಈ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳು ಮೋಡದಿಂದ ಕೂಡಿರಲಿದ್ದು, 5 ಮಿ.ಮೀ.ಯಿಂದ 30 ಮಿ.ಮೀ.ವರೆಗೂ ಮಳೆಯಾಗಬಹುದು.
ಚಿತ್ರದುರ್ಗ ಮತ್ತು ಗದಗದಲ್ಲೂ ಸಹ ಸಣ್ಣ ಪ್ರಮಾಣದ ಮಳೆಯೊಂದಿಗೆ ಇದೇ ರೀತಿಯ ವಾತಾವರಣ ಇರಲಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಹ ಮಳೆಯಾಗುವ ಸಾಧ್ಯತೆ ಇದೆ.