ಬೆಂಗಳೂರು: ಮತ್ತೊಬ್ಬ ಬಾಲಕನನ್ನು ವಿವಸ್ತ್ರಗೊಳಿಸಿ, ಆತನ ಮೇಲೆ ಹಲ್ಲೆ ನಡೆಸಿ, ನಿಷೇಧಿತ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಆರು ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆಗಳನ್ನು ಗುರುತಿಸಲು ಮತ್ತು ತಡೆಯಲು ಗೋವಿಂದರಾಜನಗರ ಪೊಲೀಸ್ ಠಾಣೆಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕದ ಸಿಬ್ಬಂದಿ ಅಕ್ಟೋಬರ್ 4 ರಂದು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
ವಿಡಿಯೋವನ್ನು ಸ್ಟೇಷನ್ ಹೌಸ್ ಆಫೀಸರ್‌ಗೆ ತೋರಿಸಲಾಗಿದ್ದು, ಅವರು ಅದನ್ನು ಪರಿಶೀಲಿಸಿದ ನಂತರ, ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು.
ಹೆಚ್ಚಿನ ತನಿಖೆಯ ಸಮಯದಲ್ಲಿ, ಅಕ್ಟೋಬರ್ 5 ರಂದು, ಪೊಲೀಸ್ ತಂಡವು ವಿಡಿಯೋದಲ್ಲಿ ಕಂಡುಬರುವ ಸಂತ್ರಸ್ತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
'ವಿಚಾರಣೆ ಮಾಡಿದಾಗ, ಸುಮಾರು ಐದಾರು ತಿಂಗಳ ಹಿಂದೆ, ಕೆಲವು ಹುಡುಗರು ಆತನನ್ನು ಕೋಣೆಯೊಳಗೆ ಕೂಡಿಹಾಕಿ, ನಿಷೇಧಿತ ಡ್ರಗ್ಸ್ ಇರುವ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದರು. ಅವನು ನಿರಾಕರಿಸಿದಾಗ, ಆತನ ಮೇಲೆ ಹಲ್ಲೆ ಮಾಡಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದರು. ಇಡೀ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂತ್ರಸ್ತ ಹೇಳಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅದೇ ದಿನ ಪೊಲೀಸರು, ಹಲ್ಲೆಯಲ್ಲಿ ಭಾಗಿಯಾಗಿದ್ದ ಆರು ಬಾಲಾಪರಾಧಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ಅವರಲ್ಲಿ ಒಬ್ಬಾತ ತನ್ನ ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ಘಟನೆ ನಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.
ಆರು ಬಾಲಾಪರಾಧಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಅವರನ್ನು ಮಡಿವಾಳದಲ್ಲಿರುವ ಸರ್ಕಾರಿ ವೀಕ್ಷಣಾ ಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇಡಬೇಕು ಮತ್ತು ಅಂತಹ ಯಾವುದೇ ನಡವಳಿಕೆಯನ್ನು ಗಮನಿಸಿದರೆ, ಸ್ಥಳೀಯ ಪೊಲೀಸರಿಗೆ ತಿಳಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
'ಸಕಾಲಿಕ ಮಾಹಿತಿಯು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು, ಅಪರಾಧ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುವುದನ್ನು ತಡೆಯಲು ಮತ್ತು ಮಾದಕವಸ್ತು ಮಾರಾಟಗಾರರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಹಾಯ ಮಾಡುತ್ತದೆ' ಎಂದು ಪೊಲೀಸರು ಹೇಳಿದರು.