ಬೆಂಗಳೂರು: 27 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರನ್ನು ವಿಜಯಲಕ್ಷ್ಮಿ ಮತ್ತು ಅವರ ಒಂದು ವರ್ಷದ ಮಗ ಭುವನ್ ಹಾಗೂ 4 ವರ್ಷದ ಮಗಳು ಬೃಂದಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಲಕ್ಷ್ಮಿ ಮತ್ತು ಅವರ ಪತಿ ರಮೇಶ್ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರಾಗಿದ್ದು, ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಮೇಶ್ ಇಲ್ಲಿನ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗುರುವಾರ ರಾತ್ರಿ ಗಂಡ ರಮೇಶ್ ಇಲ್ಲದ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮೀ ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾನೂ ಫ್ಯಾನಿಗೆ ಕೊರಳೊಡ್ಡಿದ್ದಾರೆ. ಇಂದು ವಿಜಯಲಕ್ಷ್ಮೀ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಾಗಲಗುಂಟೆ ಪೊಲೀಸರು ಮೃತದೇಹಗಳನ್ನ ನೇಣಿನ ಕುಣಿಕೆಯಿಂದ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ರಮೇಶ್ ಇತ್ತೀಚೆಗೆ ಮತ್ತೊಂದು ಮದುವೆಯಾಗಿದ್ದು, ಪತ್ನಿಗೆ ಡಿವೋರ್ಸ್ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಮನೆಯಲ್ಲಿದ್ದಾಗ ಬೇರೆ ಬೇರೆ ಹುಡುಗಿಯರ ಜೊತೆ ಫೊನ್ನಲ್ಲಿ ಮಾತನಾಡುತ್ತಿದ್ದ. ಇದರಿಂದ ವಿಜಯಲಕ್ಷ್ಮೀ ಮಾನಸಿಕವಾಗಿ ನೊಂದಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ಪದೆಪದೇ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು ಎಂದು ರಮೇಶ್ ಮಾವ ಹೇಳಿದ್ದಾರೆ.
ಆದಾಗ್ಯೂ, ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಸದ್ಯ ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ರಮೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.