ಮೈಸೂರು: ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಮೊಟ್ಟ ಮೊದಲ ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಟೂರ್ನಮೆಂಟ್ ಗೆ ಮಹಾರಾಜಾ ಮೈದಾನದಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು. ಇದು ದಸರಾ ಉತ್ಸವದ ಒಂದು ಭಾಗವಾಗಿದ್ದು ಮೈಸೂರಿನ ದಸರಾ ಹಬ್ಬವು ಸಂಸ್ಕೃತಿ, ಕಲೆ ಮತ್ತು ಕ್ರೀಡೆಯ ಸಮನ್ವಯವಾಗಿದ್ದು, ಈ ಬಾರಿ ಅದರ ಭಾಗವಾಗಿ ಬೇಸ್‌ಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬೇಸ್‌ಬಾಲ್ ನಂತಹ ಕ್ರೀಡೆಗಳ ಮೂಲಕ ಯುವಕರಲ್ಲಿ ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ಒಗ್ಗಟ್ಟಿನ ಭಾವನೆ ಬೆಳೆಸುವ ಈ ಟೂರ್ನಿಯ ಹಿಂದಿನ ಉದ್ದೇಶ. ಮೂರು ದಿನಗಳ ಕಾಲ ಟೂರ್ನಿ ನಡೆಯಲಿದ್ದು ವಿವಿಧ ಜಿಲ್ಲೆಗಳ ಯುವಕರು ಹಾಗೂ ಯುವತಿಯರ ಒಟ್ಟು 17 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಗೆದ್ದ ತಂಡಕ್ಕೆ ಬಹುಮಾನವನ್ನು ವಿತರಿಸಲಾಗುತ್ತದೆ.
ದಸರಾ ಬೇಸ್‌ಬಾಲ್ ಕಪ್–2025 ಉದ್ಘಾಟನೆ ಕುರಿತಂತೆ ಯದುವೀರ್ ಒಡೆಯರ್ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟೂರ್ನಿಯ ಕುರಿತು ಪೋಸ್ಟ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರಿನ ಯುವಕರಿಗೆ ಹೊಸ ಪ್ರೇರಣೆ ನೀಡುವ ಕ್ರೀಡಾ ಉತ್ಸವ ಎಂದು ಸಂಸದರು ಶ್ಲಾಘಿಸಿದರು.