ಬೆಂಗಳೂರು ನಡಿಗೆ ಕಾರ್ಯಕ್ರಮದ ಭಾಗವಾಗಿ ಇಂದು ಲಾಲ್ ಬಾಗ್ ಉದ್ಯಾನಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಾಗರೀಕರ ಜೊತೆ ಮಾತನಾಡಿ ದೂರುಗಳನ್ನು ಆಲಿಸಿ ಸಲಹೆಗಳನ್ನು ಪಡೆದರು. ನಂತರ ಮಾತನಾಡಿದ ಅವರು ನಾವು ಸಂಪೂರ್ಣ ಲಾಲ್‌ಬಾಗ್ ಮತ್ತು ಸುರಂಗದ ಯೋಜನೆಯನ್ನು ಪರಿಶೀಲಿಸಿದ್ದೇನೆ. ತೆರವಿಗಾಗಿ ಅರ್ಧ ಎಕರೆಯ ಸಣ್ಣ ಪ್ರದೇಶವನ್ನು ಮಾತ್ರ ಬಳಸಲಾಗುತ್ತದೆ. ಅಲ್ಲದೆ ಲಾಲ್‌ಬಾಗ್‌ನ ಅಭಿವೃದ್ಧಿಗೆ ನಾವು 10 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದೇವೆ. ವೃದ್ಧರು ಮತ್ತು ಮಹಿಳೆಯರಿಗೆ ಸರಿಹೊಂದುವಂತೆ ಜಿಮ್ ಸ್ಥಾಪಿಸಲಾಗುತ್ತದೆ ಎಂದು ಶಿವಕುಮಾರ್ ತಿಳಿಸಿದರು. ಇನ್ನು ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್ ಗೆ ತೊಂದರೆಯಾಗುವುದಿಲ್ಲ ಎಂಬ ಡಿಕೆ ಶಿವಕುಮಾರ್ ಮಾತಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ. ಒಂದು ಸ್ವಲ್ಪ ಭಾಗವನ್ನು ತೆಗೆದುಕೊಳ್ಳಲಾಗುವುದು ಎಂದು ಡಿಕೆಶಿ ಹೇಳುತ್ತಿದ್ದಾರೆ. ಆದರೆ ಆ ಭಾಗವು ಲಾಲ್‌ಬಾಗ್‌ನ ಅತ್ಯಂತ ಅಮೂಲ್ಯವಾದ ಭಾಗವಾಗಿದೆ. ಆ ಬಗ್ಗೆ ತಿಳಿಯಲು ನಾಳೆ ಲಾಲ್‌ಬಾಗ್‌ಗೆ ಭೇಟಿ ನೀಡುತ್ತೇನೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್ ಕತ್ತಿ ಬಣಕ್ಕೆ ಬಿಗ್ ಶಾಕ್ ಆಗಿದೆ. ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಗಳ ಪೈಕಿ ಜಾರಕಿಹೊಳಿ ಬಣದ 6 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಚಿಕ್ಕೋಡಿಯಿಂದ ಗಣೇಶ್ ಹುಕ್ಕೇರಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಮೂಡಲಗಿಯಿಂದ ನೀಲಕಂಠ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಕ್ಟೋಬರ್ 13ರಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಮಂಗಳೂರಿನಲ್ಲಿ ಮುಸ್ಲಿಂ ಕ್ಯಾಬ್ ಚಾಲಕನನ್ನು ಭಯೋತ್ಪಾದಕ ಎಂದು ಕರೆದ ಆರೋಪದ ಮೇಲೆ ಮಲಯಾಳಂ ನಟ ಜಯಕೃಷ್ಣನ್, ಸಂತೋಷ್ ಅಬ್ರಹಾಂ ಮತ್ತು ವಿಮಲ್ ಎಂಬ ಮೂವರು ಕೇರಳಿಗರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಉರ್ವಾ ಪೊಲೀಸರು ನಟ ಜಯಕೃಷ್ಣನ್ ಹಾಗೂ ಸಂತೋಷ್ ಅಬ್ರಹಾಂನನ್ನು ಬಂಧಿಸಿ ವಿಚಾರಣೆ ನಡೆಸಿದರು. ಅಕ್ಟೋಬರ್ 9ರ ರಾತ್ರಿ ನಟ ಜಯಕೃಷ್ಣನ್ ಉಬರ್ ಮತ್ತು ರಾಪಿಡೋ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಪಿಕಪ್ ಸ್ಥಳವನ್ನು ದೃಢೀಕರಿಸಿಕೊಳ್ಳಲು ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ಜಯಕೃಷ್ಣನ್ ಗೆ ಕರೆ ಮಾಡಿದ್ದರು. ಸಂಭಾಷಣೆ ವೇಳೆ ಜಯಕೃಷ್ಣನ್ ಹಿಂದಿಯಲ್ಲಿ ಮಾತನಾಡುತ್ತಾ ಅಹ್ಮದ್ ಗೆ ಅಪಹಾಸ್ಯ ಮಾಡಿ ಮುಸ್ಲಿಂ ಉಗ್ರಗಾಮಿ ಮತ್ತು ಭಯೋತ್ಪಾದಕ ಎಂದು ಕರೆದರು ಎಂದು ಅಹ್ಮದ್ ಆರೋಪಿಸಿದ್ದಾರೆ.
ಬಿಎಂಟಿಸಿ ಬಸ್ ಡಿಕ್ಕಿಯಾಗಿ 9 ವರ್ಷದ ಪಾಂಚಜನ್ಯ ಸ್ಕೂಲ್ನ ವಿದ್ಯಾರ್ಥಿನಿ ಭುವನ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ನಡೆದಿದೆ. ಶಾಲೆ ಮುಗಿದ ಮೇಲೆ ಬೇಕರಿಯಲ್ಲಿ ಬಿಸ್ಕೆತ್ ತಗೆದುಕೊಂಡು ಬಾಲಕಿ ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಮತ್ತೊಂದೆಡೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ 9ನೇ ಗೇಟ್ ಬಳಿ 3 ಆಟೋ, 3 ಕಾರು, ಬೈಕ್‌ಗಳು ಸೇರಿದಂತೆ 9 ವಾಹನಗಳಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ. ಬಿಎಂಟಿಸಿ ಬಸ್ ಚಾಲಕನಿಗೆ ಫಿಡ್ಸ್ ಬಂದಿದ್ದರಿಂದ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ರೇನ್‌ಬೋ ಲೇಔಟ್, ಪಯೋನೀರ್ ಲೇಕ್ ರೆಸಿಡೆನ್ಸಿ ಮತ್ತು ಆನೇಕಲ್ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀಲಾದ್ರಿ ನಗರ, ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ನಗರದ ಅತ್ಯಂತ ಜನನಿಬಿಡ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಹೊರ ವರ್ತುಲ ರಸ್ತೆಯುದ್ದಕ್ಕೂ ಮೊಣಕಾಲು ಉದ್ದ ನೀರು ನಿಂತದ್ದು ವರದಿಯಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು, ಯಾವುದೇ ಪ್ರಮುಖ ಹಾನಿಯ ಘಟನೆಗಳು ವರದಿಯಾಗಿಲ್ಲ. ನಮ್ಮ ಅಧಿಕಾರಿಗಳು ತ್ವರಿತಗತಿಯ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು. ಬಸವೇಶ್ವರನಗರದ 3ನೇ ಬ್ಲಾಕ್‌ನಲ್ಲಿ ಶುಕ್ರವಾರ ರಾತ್ರಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ನಿಂತಿದ್ದ ಎರಡು ವಾಹನಗಳಿಗೆ ಹಾನಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನೆರೆಯ ಜಿಲ್ಲೆಗಳಲ್ಲೂ ರಾತ್ರಿಯಿಡಿ ವ್ಯಾಪಕ ಮಳೆಯಾಗಿದೆ.