ರಾಜ್ಯದಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ RSSನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು. ಇಂತಹ ಕ್ರಮಗಳು ಭಾರತದ ಏಕತೆ ಮತ್ತು ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ. RSS ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ಶಾಖೆಗಳನ್ನು ನಡೆಸುತ್ತಿದೆ. ಅಲ್ಲಿ ಘೋಷಣೆಗಳನ್ನು ಕೂಗಲಾಗುತ್ತದೆ. ಮಕ್ಕಳು ಮತ್ತು ಯುವಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬಲಾಗುತ್ತದೆ ಎಂದು ಆರೋಪಿಸಿ ಪತ್ರ ಬರೆದಿದ್ದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. RSS ಕಾರ್ಯಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರದ ಚಟದಿಂದ ಮಾತನಾಡುವವರು ಇಂತಹ ಹೇಳಿಕೆಗಳನ್ನು ಕೊಡುತ್ತಾರೆ. ಈ ಹಿಂದೆ ಎರಡ್ಮೂರು ಬಾರಿ ಕಾಂಗ್ರೆಸ್ ESS ನ್ನು ನಿಷೇಧಿಸಿತ್ತು. ಅದೇ ಕಾಂಗ್ರೆಸ್ ಪಕ್ಷ ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆಗಳೂ ದೇಶದ ಮುಂದಿದೆ. ಮತ್ತೊಮ್ಮೆ RSS ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಇನ್ನು ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ RSSನ ನಿಷೇಧಕ್ಕೆ ಸಚಿವರು ಕರೆ ಕೊಟ್ಟಿರುವುದು ಅವರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬೆಂಗಳೂರಿನ ಮತ್ತೀಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ಬೆಂಗಳೂರು ನಡಿಗೆ ಕಾರ್ಯಾಕ್ರಮದ ವೇಳೆ ದೊಡ್ಡ ಹೈಡ್ರಾಮಾ ನಡೆಯಿತು. ನಿನ್ನೆ ಲಾಲ್ ಬಾಗ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮ ಆರಂಭಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇಂದು ಜೆಪಿ ಪಾರ್ಕ್ ನಲ್ಲಿ ಅಹವಾಲನ್ನು ಸ್ವೀಕರಿಸಿದರು. ಈ ವೇಳೆ ಅಲ್ಲಿಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಸ್ಥಳೀಯ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕಾರ್ಯಕ್ರಮದ ಬ್ಯಾನರ್ ನಲ್ಲಿ ಶಾಸಕ ಹಾಗೂ ಸಂಸದರ ಫೋಟೋ ಹಾಕಿಲ್ಲ. ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್ ಕಾರ್ಯಕ್ರಮವೋ ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರನ್ನು ಮುನಿರತ್ನ ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಮುನಿರತ್ನರನ್ನು ವೇದಿಕೆಯಿಂದ ಕರೆದುಕೊಂಡು ಹೋದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಇಂತಹ ನಾಯಕರನ್ನು ಆಯ್ಕೆ ಮಾಡಿ ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಾ ಎಂಬುದು ನನಗೆ ಅರ್ಥವಾಯಿತು ಎಂದು ಡಿಕೆಶಿ ಹೇಳಿದರು.
ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಖುದ್ದು ದೇವಾಲದಲ್ಲೇ ಹಾಜರಿದ್ದು ಭಕ್ತರ ಕುಂದುಕೊರತೆಗಳನ್ನು ಬಗೆಹರಿಸುವ ಕೆಲಸ ಮಾಡಿದರು. ಇನ್ನು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿರುವುದರಿಂದ ಕೇವಲ ಎರಡೇ ದಿನಗಳಲ್ಲಿ 2.24 ಕೋಟಿರೂ. ಆದಾಯ ದಾಖಲಿಸಿದೆ. ಈ ಮಧ್ಯೆ ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಸಮಾಜ ಕಲ್ಯಾಣ ಹಾಗೂ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿ ಅಮಾನತು ಮಾಡಲಾಗಿದೆ. ಗುರುತಿನ ಚೀಟಿ ದುರುಪಯೋಗದ ಆರೋಪದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಗಳಾದ ರಮೇಶ್ ಮತ್ತು ಆನಂದ್ ಎಂಬುವರನ್ನು ಜಿಲ್ಲಾಧಿಕಾರಿ ಕೆಎಸ್ ಲತಾ ಅಮಾನತುಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ನಿಂದನೀಯ, ಬೆದರಿಕೆ ಕಾಮೆಂಟ್, ಪೋಸ್ಟ್ ಹಾಕಿದ್ದ ಐವರ ವಿರುದ್ಧ ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಎಂ.ಸಿ. ಮಂಜು ಹೆಸರಿನ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಕಾಯ್ದೆಯಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ 06ರಂದು ಸುಪ್ರೀಂ ಕೋರ್ಟ್ ನಲ್ಲಿ ಕಲಾಪ ನಡೆಯುತ್ತಿದ್ದಾಗಲೇ ವಕೀಲ ರಾಕೇಶ್ ಕಿಶೋರ್ ಎಂಬುವರು CJI ಬಿರ್.ಆರ್ ಗವಾಯಿ ಮೇಲೆ ಶೂ ಎಸೆದಿದ್ದರು.