ಬೆಂಗಳೂರು: 'ಮಾಟಮಂತ್ರ'ದಿಂದ ಮುಕ್ತಿ ಅಥವಾ 'ರಹಸ್ಯ ನಿಧಿಗಳನ್ನು ಹಿಂಪಡೆಯಲು' ಪೂಜೆ ವಿಧಿ - ವಿಧಾನಗಳನ್ನು ಮಾಡುವುದಾಗಿ ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ 49 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಲಾರ ಮೂಲದ ದಾದಾ ಪೀರ್ ಎಂದು ಗುರುತಿಸಲಾಗಿದ್ದು, ಆತನಿಂದ 53 ಲಕ್ಷ ರೂ. ಮೌಲ್ಯದ 485.4 ಗ್ರಾಂ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 26 ರಂದು ಹುಳಿಮಾವು ಪೊಲೀಸರಿಗೆ ಬನ್ನೇರುಘಟ್ಟ ಮುಖ್ಯ ರಸ್ತೆಯ ಬಳಿ ಅನುಮಾನಾಸ್ಪದ ವ್ಯಕ್ತಿ ನಿಂತಿರುವ ಬಗ್ಗೆ ಸುಳಿವು ಸಿಕ್ಕಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ತನ್ನ ಬಳಿ ಇದ್ದ ಆಭರಣಗಳನ್ನು ಕದ್ದಿದ್ದಾಗಿ ಮತ್ತು ಅವುಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾದಾ ಪೀರ್ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಯು 'ಮಾಟಮಂತ್ರದಿಂದ ಮುಕ್ತಗೊಳಿಸಲು ಅಥವಾ 'ರಹಸ್ಯ ನಿಧಿಗಳನ್ನು ಹೊರತೆಗೆಯಲು ಪೂಜೆ ಮಾಡುವುದಾಗಿ ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.