ಹಾಸನ: ಹಾಸನಾಂಬೆ ದರ್ಶನೋತ್ಸವದ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ದೇಗುಲ ಭೇಟಿ ಇದೀಗ ವಿವಾದಕ್ಕೆ ಕಾರಣವಾಗಿದೆ.
ಶಿಷ್ಟಾಚಾರ ಕ್ರಮಗಳನ್ನು ಪಾಲಿಸದೆ ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ಕಾರು ತಡೆದ ಕಂದಾಯ ಇಲಾಖೆಯ ಸಿಬ್ಬಂದಿಗಳ ವಿರುದ್ದ ಹೌಹಾರಿದರು ಎಂದು ತಿಳಿದುಬಂದಿದೆ.
ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ತಮ್ಮದೇ ಕಾರಿನಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸಿದ್ದು, ಸಾವಿರ ರೂ. ಟಿಕೆಟ್ ಪಡೆದುಕೊಂಡಿದ್ದರೂ ಗಣ್ಯರಿಗಾಗಿ ನಿಗದಿಪಡಿಸಿದ ಶಿಷ್ಟಾಚಾರ ಮಾರ್ಗವನ್ನು ಅನುಸರಿಸದೆ ನೇರವಾಗಿ ದೇವಾಲಯಕ್ಕೆ ಬಂದರು ಎನ್ನಲಾಗಿದೆ.
ಭವಾನಿ ರೇವಣ್ಣ ಅವರು ಹಾಸನಾಂಬ ದೇವಿಗೆ ಸೀರೆ, ಬಳೆಗಳು, ಕುಂಕುಮ, ಅರಿಶಿನ, ತೆಂಗಿನಕಾಯಿ, ವೀಳ್ಯದೆಲೆ ಮತ್ತು ಹೂವುಗಳನ್ನು ಅರ್ಪಿಸಿ ಗರ್ಭಗುಡಿಯೊಳಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಕಳೆದಿದ್ದಾರೆ.
ದೇವಾಲಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ದೇವಾಲಯ ಪ್ರವೇಶ ವ್ಯವಸ್ಥೆ ಮತ್ತು ತ್ವರಿತ ದರ್ಶನವನ್ನು ಸುಗಮಗೊಳಿಸಲು ಜಿಲ್ಲಾಡಳಿತ ರೂಪಿಸಿದ ಹೊಸ ನಿಯಮಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಇದೇ ವೇಳೆ ಆರ್'ಎಸ್ಎಸ್ ಚಟುವಟಿಕೆ ನಿಷೇಧಿಸುವ ಪ್ರಿಯಾಂಕ್ ಖರ್ಗೆಯವರ ಪ್ರಸ್ತಾಪದ ಕುರಿತಂತೆಯೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತೇನೆ. ಸಾಮಾನ್ಯ ಮನುಷ್ಯ ಮತ್ತು ರೈತರ ಕಲ್ಯಾಣಕ್ಕಾಗಿಯೂ ಪ್ರಾರ್ಥಿಸಿದೆ ಎಂದು ತಿಳಿಸಿದರು.