ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಜೀವನ ಪಯಣದ ಕುರಿತ ಪುಸ್ತಕ 'ಎ ಸಿಂಬಲ್ ಆಫ್ ಲಾಯಲ್ಟಿ ಡಿ ಕೆ ಶಿವಕುಮಾರ್' ಬಿಡುಗಡೆಯಾಗಿದೆ. ನಿರ್ದೇಶಕ ಕೆಎಂ ರಘು ರಚಿಸಿರುವ ಪುಸ್ತಕ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಿನ್ನೆ ಲೋಕಾರ್ಪಣೆಗೊಂಡಿತು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಹಜವಾಗಿ ಡಿ.ಕೆ.ಶಿವಕುಮಾರ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಡಿ ಕೆ ಶಿವಕುಮಾರ್ ಆಗಾಗ ಹಿಂದುತ್ವದ ಬಗ್ಗೆ ಮೃದು ಧೋರಣೆ ತಳೆಯುತ್ತಾರೆ, ಬಿಜೆಪಿಗೆ ಹೋಗಲು ಅವರಿಗೆ ಆಫರ್ ಇದೆ, ಅವರಿಗೂ ಮನಸ್ಸಾಗಿತ್ತು ಎಂಬ ಮಾತುಗಳು ಬಿಜೆಪಿ ನಾಯಕರಿಂದ ಈ ಹಿಂದೆ ಕೇಳಿಬಂದಿದ್ದವು. ಒಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಹೇಳಿದ್ದರು.
ಬಿಜೆಪಿಯಿಂದ ಆಫರ್ ಬಂದಿತ್ತು
ಕೇಸರಿ ಪಕ್ಷದಿಂದ ನನಗೆ ಆಫರ್ ಬಂದಿದ್ದು ನಿಜ ಎಂದು ಸ್ವತಃ ಡಿ ಕೆ ಶಿವಕುಮಾರ್ ಅವರೇ ಈಗ ಹೇಳಿದ್ದಾರೆ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ನನ್ನನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳಾಗಿತ್ತು ಎಂದಿದ್ದಾರೆ.
ಅಂದು ನಡೆದಿದ್ದೇನು, ಇನ್‌ಕಮ್ ಟ್ಯಾಕ್ಸ್ ಆಡಿಟರ್ ಫೋನ್
ನಿನ್ನೆ ತಮ್ಮ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಬೆಂಗಳೂರಿನ ಮೂವರು ಕಾಂಗ್ರೆಸ್ ಶಾಸಕರು ಸೇರಿ ಹಲವು ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಕಡೆ ಮುಖ ಮಾಡಿದ್ದರು. ಅವತ್ತು ಕನಕಪುರದಲ್ಲಿದ್ದ ನಾನು ಓಡೋಡಿ ಬಂದು ನಮ್ಮ 5-6 ಶಾಸಕರನ್ನು ಕ್ವಾರ್ಟರ್ಸ್‌ಗೆ ಕರೆದುಕೊಂಡು ಬಂದಿದ್ದೆ. ಆಗ ದೆಹಲಿಯಿಂದ ನನಗೆ ಫೋನ್ ಬಂದಿತ್ತು. ಇನ್‌ಕಮ್ ಟ್ಯಾಕ್ಸ್ ಆಡಿಟರ್‌ರಿಂದ ಫೋನ್ ಮಾಡಿ ಮಾತನಾಡಿಸಿದ್ದರು. ಅಲ್ಲಿ ಒಬ್ಬ ಡಿಜಿ ಸಹ ಇದ್ದ. ಅವನು ಮಾತನಾಡಿದ. ಡಿಸಿಎಂ ಆಗುತ್ತೀರಾ ಅಥವಾ ಜೈಲಿಗೆ ಹೋಗುತ್ತೀರಾ ಎರಡರಲ್ಲಿ ಒಂದು ಆಯ್ಕೆ ಮಾಡಬೇಕು ಎಂದ. ಜೊತೆಗಿದ್ದ ಶಾಸಕರನ್ನು ವಾಪಸ್ ಕಳುಹಿಸಲು ಹೇಳಿದರು. ಆದರೆ ನಾನು ಪಕ್ಷನಿಷ್ಠೆಗಾಗಿ ಡಿಸಿಎಂ ಬೇಡ ಎಂದು ಜೈಲುವಾಸವನ್ನೇ ಆಯ್ಕೆ ಮಾಡ್ಕೊಂಡೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ರಾಜೀವ್ ಗಾಂಧಿಯವರು ಟಿಕೆಟ್ ಕೊಡಿಸಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕನಾದೆ. ಬಂಗಾರಪ್ಪನವರ ಕಾಲದಲ್ಲಿ ಮಂತ್ರಿಯಾದೆ, ಪಕ್ಷ ನನ್ನನ್ನು ಬೆಳೆಸಿರುವಾಗ ಆ ಪಕ್ಷಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯನಿಷ್ಠೆಯಾಗಿತ್ತು. ಪಕ್ಷಾಂತರ ಮಾಡುತ್ತಿದ್ದರೆ ಅಂದೇ ಡಿಸಿಎಂ ಆಗುತ್ತಿದ್ದೆ ಎಂದರು.
ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು 2018 ರಲ್ಲಿ ತಮ್ಮ ರಾಜಕೀಯ ವಿರೋಧಿಗಳಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸಿದ್ದೇನೆ ಎಂದು ಅವರು ಹೇಳಿದರು.
ಮುಂದಿನ 8-10 ವರ್ಷ ಮಾತ್ರ ಸಕ್ರಿಯ ರಾಜಕಾರಣಿ
ರಾಜಕೀಯದಲ್ಲಿ ಯಾವುದೂ ನಿಂತ ನೀರಲ್ಲ. A Symbol Of Loyalty ಪುಸ್ತಕದಲ್ಲಿ ನನ್ನ ಬದುಕಿನ ಶೇ 99 ರಷ್ಟು ಅಂಶಗಳು ಸತ್ಯ ಇವೆ. ನಾನು ಮುಂದಿನ 8-10 ವರ್ಷ ಮಾತ್ರ ಸಕ್ರಿಯ ರಾಜಕಾರಣದಲ್ಲಿ ಇರಬಲ್ಲೆ, ನಾವು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ನಾನು ಹೆಚ್ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಆದರೆ ಪಕ್ಷದ ನಿಷ್ಠೆಗಾಗಿ ನಾನು ಹೆಚ್ಡಿ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದೇನೆ. ನನ್ನ ವಿರೋಧಿಗಳು ಕಥೆ ಕಟ್ಟಿ ಆರೋಪ ಮಾಡುತ್ತಾರೆ. ಆದರೆ ನಾನು ಅದನ್ನೂ ಸ್ವಾಗತಿಸುತ್ತೇನೆ ಎಂದರು.
RSS ಬಗ್ಗೆ ಮಾತನಾಡಿದಕ್ಕೆ ಕ್ಷಮಾಪಣೆ ಕೇಳಲು ಯಾರೂ ಹೇಳಿಲ್ಲ
ಕಳೆದ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ್ದನ್ನು ವಿವಾದ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಆರ್ ಎಸ್ ಎಸ್ ಬಗ್ಗೆ ನಾನು ಸದನದಲ್ಲಿ ಮಾತನಾಡಿದ್ದಕ್ಕೆ ಕ್ಷಮಾಪಣೆ ಕೇಳು ಎಂದು ನನಗೆ ಯಾರೂ ಹೇಳಲಿಲ್ಲ. ನನ್ನ ಕಾರ್ಯಕರ್ತರಿಗೆ ನೋವು ಆಗಬಾರದು ಎಂದು ಕ್ಷಮೆ ಕೇಳಿದೆ.
ಸಿಎಂ ಸಿದ್ದರಾಮಯ್ಯ ಬಿಡುಗಡೆ
‘‘ನೀರಿನ ಮೇಲಿನ ಹೆಜ್ಜೆ’’ ಎಂಬ ನನ್ನ ಜೀವನದ ಕುರಿತ ಮತ್ತೊಂದು ಪುಸ್ತಕ ನವೆಂಬರ್ 6ಕ್ಕೆ ಬಿಡುಗಡೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಅವರೇ ಇದನ್ನು ಬಿಡುಗಡೆ ಮಾಡಲಿದ್ದಾರೆ. ಒಬ್ಬರು ಧರ್ಮಾಧಿಕಾರಿ ಭಾಷಣದಿಂದ ಪ್ರಭಾವಿತನಾಗಿ ನಾನು ಸಂಸ್ಕೃತ ಕಲಿತಿದ್ದೇನೆ ಎಂದು ಡಿ ಕೆ ಶಿವಕುಮಾರ್ ಶ್ಲೋಕ ಪಠಿಸಿದರು.
ಪುಸ್ತಕದ ಲೇಖಕರು ನನ್ನನ್ನು ಇಂದು ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸುವವರೆಗೂ ನಾನು ಅವರನ್ನು ಭೇಟಿಯಾಗಿರಲಿಲ್ಲ. ನಾನು ಪುಸ್ತಕ ಬರೆಯಲು ಅನುಮತಿ ನೀಡಿರಲೂ ಇಲ್ಲ, ಮಾಹಿತಿಯೂ ನೀಡಿರಲಿಲ್ಲ. ಆದರೂ ಬರಹಗಾರರು ನನ್ನ ಹಳೆಯ ಭಾಷಣಗಳನ್ನು ಸಂಗ್ರಹಿಸಿ ನನ್ನ ಆಪ್ತ ವಲಯ ಸಂಪರ್ಕಿಸಿ ಶೇಕಡಾ 90ರಷ್ಟು ನಿಖರವಾದ ಮಾಹಿತಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ. ನಾನು ಪುಸ್ತಕ ಅಭಿಮಾನಿಯಲ್ಲ, ನನ್ನ ರಾಜಕೀಯ ಒತ್ತಡಗಳಿಂದಾಗಿ ಪುಸ್ತಕ ಓದಲು ಸಾಧ್ಯವಾಗುವುದಿಲ್ಲ ಎಂದರು.