ದಾವಣಗೆರೆ: ಸಭೆಗೆ ಬರೋಕೆ ಮಾತ್ರ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತೆಗೆದುಕೊಳ್ಳುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಚನ್ನಗಿರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಈ ಹಿನ್ನೆಲೆ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೀಟಿಂಗ್ ಬನ್ನಿ ಅಂದ್ರೆ ಪ್ರೆಗ್ನೆಂಟ್ ಇದೀನಿ ಅಂತಾ ಹೇಳ್ತಾರೆ. ಅದೇ ಗಿಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಬಾರಿ ಚಕಪ್‌ಗೆ ಹೋಗಿದೀನಿ, ಅಲ್ಲಿ ಹೋಗಿದೀನಿ, ಇಲ್ಲಿ ಹೋಗಿದೀನಿ ಎಂದು ಹೇಳ್ತಾರೆ. ಪ್ರೆಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಿ. ಈ ತರ ಹೇಳೋಕೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪ್ರೆಗ್ನೆನ್ಸಿ ರಜೆ ಇದೆ ಅಲ್ಲವಾ, ಅದನ್ನು ತಗೆದುಕೊಳ್ಳಲಿ. ಸಂಬಳ ಬೇಕು, ಗಿಂಬಳವೂ ಬೇಕು ಆದ್ರೆ ಇವರಿಗೆ ಡ್ಯೂಟಿ ಮಾಡೋಕೆ ಆಗಲ್ಲ. ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ಲವಾ ಅಂತ ಅವರನ್ನು ಕೇಳಿ? ಪ್ರತಿಬಾರಿ ಕೇಳಿದಾಗಲೂ, ಪ್ರೆಗ್ನೆಂಟ್ ಇದ್ದು, ಡಾಕ್ಟರ್ ಬಳಿಯಲ್ಲಿದ್ದೀನಿ ಎಂದು ಹೇಳುತ್ತಾರೆ.
ಈ ಕುರಿತು ತಕ್ಷಣವೇ ಜಿಲ್ಲಾಡಳಿತ, ಸರ್ಕಾರ ಮತ್ತು ಸಿಸಿಎಫ್‌ಗೆ ಪತ್ರ ಬರೆಯಿರಿ. ಪತ್ರದಲ್ಲಿ ನಾನು ಹೇಳಿರುವ ಎಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು. ಸಭೆಗೆ ಬರಲು ಆಗದಿದ್ದರೆ ಸರ್ಕಾರದಿಂದ ಸಿಗುವ ಹೆರಿಗೆ ರಜೆ ತೆಗೆದುಕೊಂಡು ಹೋಗಲು ಹೇಳಿ. ನೋಟಿಸ್‌ಗೆ ಅವರೇ ಬಂದು ಉತ್ತರ ಕೊಡಬೇಕು ಎಂದು ಶಾಸಕ ಶಿವಗಂಗಾ ಬಸವರಾಜು ಸೂಚಿಸಿದ್ದಾರೆ.
ಸದ್ಯ ಶಾಸಕ ಶಿವಗಂಗಾ ಬಸವರಾಜ್ ಅವರ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗರ್ಭಿಣಿ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.