ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾತ್ರ ಯಾವುದಕ್ಕೂ ಜಗ್ಗದೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ದರ ಏರಿಕೆ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಕೆಲವು ಸ್ಪಷ್ಟೀಕರಣಗಳನ್ನು ಕೋರಿ ಬಿಎಂಆರ್‌ಸಿಎಲ್'ಗೆ ಪತ್ರವನ್ನೂ ಬರೆದಿದ್ದರು.
ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಅವರು, ಫೆಬ್ರವರಿಯಲ್ಲಿ ಜಾರಿಗೆ ತರಲಾದ ಹೆಚ್ಚಳವು ಶಾಸನಬದ್ಧ ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸುಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.
FFC ವರದಿಯಲ್ಲಿ ಉಲ್ಲೇಖಿಸಲಾದ ಶೇ.105.15 ದರ ಏರಿಕೆ ಎಂಬುದು ನಿಜವಾದ ದರ ಹೆಚ್ಚಳವನ್ನು ಸೂಚಿಸುವುದಿಲ್ಲ. ಬದಲಿಗೆ, ಇದು 2017 ರಿಂದ ಕಾರ್ಯಾಚರಣಾ ವೆಚ್ಚದಲ್ಲಿನ ಒಟ್ಟು ಬದಲಾವಣೆಗಳನ್ನು ಟ್ರ್ಯಾಕ್ ಮಾಡುವ ಸಂಯೋಜಿತ ವೆಚ್ಚ ಸೂಚ್ಯಂಕದ ಚಲನೆಯನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಬಡ್ಡಿ, ಸವಕಳಿ, ಸಿಬ್ಬಂದಿ ಮತ್ತು ಇಂಧನ ವೆಚ್ಚಗಳನ್ನು ಹೊರತುಪಡಿಸಲಾಗಿದೆ.
ಸೂಚ್ಯಂಕದ ಚಲನೆ ಕಾರ್ಯಾಚರಣಾ ವೆಚ್ಚದಲ್ಲಿ ಶೇ.105.2 ಏರಿಕೆಯನ್ನು ತೋರಿಸಿದರೂ, FFCಯ ನಿಜವಾದ ದರ ಶಿಫಾರಸುಗಳು ಸ್ಮಾರ್ಟ್-ಕಾರ್ಡ್, ಆಫ್-ಪೀಕ್ ರಿಯಾಯಿತಿಗಳನ್ನು ಅನ್ವಯಿಸುವ ಮೊದಲು 10 ಶ್ರೇಣಿಗಳಲ್ಲಿ ಶೇ.0 ರಿಂದ ಶೇ.81.82 ವರೆಗೆ ಇತ್ತು, ಸರಾಸರಿ ಶೇ.51.55 ರಷ್ಟಿತ್ತು. ಹಿಂದಿನ 29 ಸ್ಲ್ಯಾಬ್‌ಗಳನ್ನು 10 ಕ್ಕೆ ಇಳಿಸುವ ಮೂಲಕ ದರ ರಚನೆಯನ್ನು ತರ್ಕಬದ್ಧಗೊಳಿಸಲಾಯಿತು.
ಒಟ್ಟು 4,624 ದರ ಪಟ್ಟಿ ನಮೂದುಗಳಲ್ಲಿ, ಶೇ.70 ಕ್ಕಿಂತ ಹೆಚ್ಚು ದರಗಳು ಶೇ.30 ರಿಂದ ಶೇ.60ರಷ್ಟು ಏರಿಕೆಯಾಗಿವೆ. ಶೇ.7.6 ದರಗಳು ಶೇ.71.4 ವರೆಗೆ ಏರಿಕೆಯಾಗಿವೆ. ಆದರೆ ಸುಮಾರು ಶೇ.3 ದರಗಳು ವಾಸ್ತವವಾಗಿ ಕಡಿಮೆಯಾಗಿವೆ. FFC ಯಲ್ಲಿನ ಶೇ.366 ಅಂಕಿಅಂಶವು 7.5 ವರ್ಷಗಳ ಅವಧಿಯಲ್ಲಿ ನಿರ್ವಹಣೆ ಮತ್ತು ಆಡಳಿತ ವೆಚ್ಚಗಳಲ್ಲಿನ ತೂಕದ ಸೂಚ್ಯಂಕ ಚಲನೆಯನ್ನು ಪ್ರತಿನಿಧಿಸುತ್ತದೆ, ನೇರ ವರ್ಷದಿಂದ ವರ್ಷಕ್ಕೆ ವೆಚ್ಚದ ಹೆಚ್ಚಳವಲ್ಲ. ಈ ಲೆಕ್ಕಾಚಾರಗಳು ಜೂನ್ 2017 ರಲ್ಲಿ ಕಾರ್ಯಾರಂಭ ಮಾಡಿದ ಪೂರ್ಣ 42.3 ಕಿಮೀ ಹಂತ-1 ನೆಟ್‌ವರ್ಕ್ ಅನ್ನು ಆಧರಿಸಿವೆಯೇ ಹೊರದು 30.3 ಕಿಮೀ ಉದ್ದದ ಮೇಲಲ್ಲ ಎಂದು ವಿವರಿಸಿದರು.
ಶುಲ್ಕೇತರ ಆದಾಯ ಮೂಲಗಳು ಸೀಮಿತವಾಗಿರುವುದರಿಂದ ಆರ್ಥಿಕ ಸುಸ್ಥಿರತೆ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆವರ್ತಕ ಹೊಂದಾಣಿಕೆಗಳು ಅಗತ್ಯವೆಂದೂ ಇದೇ ವೇಳೆ ತಿಳಿಸಿದ್ದಾರೆ.