ಡಿ.ಕೆ ಶಿವಕುಮಾರ್ 
ರಾಜ್ಯ

ನೆಹರೂ ಕಾಲದಿಂದ ಬಡವರಿಗೆ ಉಚಿತ ಆಹಾರ ವಿತರಣೆ; ಟೀಕೆ ಮಾಡಿದವರಿಂದಲೇ ನಮ್ಮ 'ಗ್ಯಾರಂಟಿ' ನಕಲು: ಡಿ.ಕೆ ಶಿವಕುಮಾರ್

ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಕೊಡಲಾಯಿತು. ಬಡವರಿಗೆ ಪಡಿತರ ಜೊತೆಗೆ ಪಡಿತರ ಚೀಟಿ ವ್ಯವಸ್ಥೆ ಮಾಡಲಾಯಿತು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಶಾಲೆಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಆರಂಭಿಸಲಾಯಿತು.

ಬೆಂಗಳೂರು: ಈ ಸರ್ಕಾರ ಬರುವ ಮುನ್ನ ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಸುವುದಾಗಿ ಭರವಸೆ ನೀಡಿದೆವು. ನಂತರ ಇದರ ದುರ್ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟದಲ್ಲಿ ಹೊಸ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಯಾರ ಒತ್ತಡಕ್ಕೂ ಒಳಗಾಗಿ ಈ ತೀರ್ಮಾನ ಮಾಡಿಲ್ಲ. ಈ ವಿಚಾರವಾಗಿ ಸಮೀಕ್ಷೆ ನಡೆಸಿ, ಜನಸಾಮಾನ್ಯರು ಹಾಗೂ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಈ ವಿಚಾರವಾಗಿ ರಾಜಕೀಯ ಚರ್ಚೆ ಮಾಡುತ್ತಾರೆ. ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಕೊಟ್ಟರು ಹೋರಾಟ ಮಾಡುವುದಾಗಿ ಹೇಳುತ್ತಿದ್ದರು.

ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ನಮ್ಮ ಸರ್ಕಾರ ಸದಾ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಅವರ ರಾಜ್ಯಗಳ ಯೋಜನೆ ನಿರ್ಣಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿ ಹನಿ ನೀರಿಗೆ ಕೊಡುವ ಪ್ರಾಮುಖ್ಯತೆಯನ್ನು ಪ್ರತಿ ಅಗುಳು ಅನ್ನಕ್ಕೂ ನೀಡಬೇಕು. ನಾವೆಲ್ಲರೂ ಪ್ರಕೃತಿ ನಿಯಮದಲ್ಲಿ ಬದುಕುತ್ತಿದ್ದು, ಗಾಳಿ, ನೀರು, ಸೂರ್ಯನ ಜೊತೆಗೆ ಆಹಾರದ ಮೇಲೆ ಅವಲಂಬಿತವಾಗಿದ್ದೇವೆ. ಪ್ರಕೃತಿ ಆಹಾರದ ಮೂಲಕ ನಮ್ಮನ್ನು ಕಾಪಾಡಿಕೊಂಡು ಬಂದಿದೆ. ಹಸಿದವನಿಗೆ ಮಾತ್ರ ಆಹಾರದ ಬೆಲೆ ಗೊತ್ತಿದೆ. ಎಲ್ಲರೂ ಕಷ್ಟಪಡುವುದೂ ಒಂದು ತುತ್ತು ಆಹಾರ, ಒಂದು ಗೇಣು ಬಟ್ಟೆಗಾಗಿ. ಇದರ ಹೊರತಾಗಿ ನಾವು ಏನೇ ಮಾಡಿದರೂ ಅವು ತಾತ್ಕಾಲಿಕ ಮಾತ್ರ ಎಂದು ಹೇಳಿದರು.

ಈ ದೇಶದಲ್ಲಿ ಬಡವರ ಬದುಕಿನಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷ ಹೇಗೆ ತೀರ್ಮಾನ ಮಾಡಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಯಾಗಿ ನನಗೆ ಗೊತ್ತಿದೆ. ನೆಹರೂ ಅವರ ಕಾಲದಿಂದ ಬಡವರಿಗೆ ಆಹಾರ ವಿತರಣೆ ಕಾರ್ಯಕ್ರಮ ರೂಪಿಸಿದರು. ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಕೊಡಲಾಯಿತು. ಬಡವರಿಗೆ ಪಡಿತರ ಜೊತೆಗೆ ಪಡಿತರ ಚೀಟಿ ವ್ಯವಸ್ಥೆ ಮಾಡಲಾಯಿತು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಶಾಲೆಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಆರಂಭಿಸಲಾಯಿತು.

ನಂತರ ಸಿದ್ದರಾಮಯ್ಯ ಅವರು ಬಸವ ಜಯಂತಿ ದಿನ ಅಧಿಕಾರ ಸ್ವೀಕರಿಸಿ ಮೊದಲ ದಿನವೇ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ನಮ್ಮ ಈ ಕಾರ್ಯಕ್ರಮಗಳನ್ನು ಯಾವುದೇ ಸರ್ಕಾರಗಳು ನಿಲ್ಲಿಸಲು ಸಾಧ್ಯವಾಗಿಲ್ಲ. ನಂತರ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದರು” ಎಂದು ಸ್ಮರಿಸಿದರು.

ಈ ಹಿಂದೆ ಉಚಿತ ಗ್ಯಾಸ್ ನೀಡುವ ಯೋಜನೆಗೆ ಮೋದಿ ಫೋಟೋ ಹಾಕಿ ಎಲ್ಲಾ ಪೆಟ್ರೋಲ್ ಬಂಕ್ ಗಳ ಮುಂದೆ ಹಾಕುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ. 400 ರೂಪಾಯಿ ಇದ್ದ ಅಡುಗೆ ಅನಿಲ 1100ಕ್ಕೆ ಏರಿಕೆಯಾಗಿತ್ತು. ಎಲ್ಲದರ ಬೆಲೆಗಳು ಗಗನಕ್ಕೇರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಇದಕ್ಕೆ ಪ್ರತಿ ವರ್ಷ 53 ಸಾವಿರ ಕೋಟಿ ಅನುದಾನ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳು ಹಾಗೂ ಇತರೆ ನಾಯಕರು ನಮ್ಮ ಯೋಜನೆ ಟೀಕೆ ಮಾಡಿದರೂ ಕೊನೆಗೆ ತಮ್ಮ ರಾಜಕೀಯ ಸ್ಥಾನಮಾನ ಉಳಿಸಿಕೊಳ್ಳಲು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ಬಿಹಾರದಲ್ಲಿ ಚುನಾವಣೆಯೇ ಘೋಷಣೆಯೇ ಆಗದಿದ್ದ ವೇಳೆಯಲ್ಲೇ ಆ ರಾಜ್ಯದ ಮಹಿಳೆಯರ ಖಾತೆಗೆ 10 ಸಾವಿರ ಹಾಕುತ್ತಿದ್ದಾರೆ. ಇಲ್ಲಿ ಜನರ ಹೊಟ್ಟೆಪಾಡು ವಿಚಾರ ಬಹಳ ಮುಖ್ಯ ಎಂದು ಸಾಬೀತಾಗುತ್ತದೆ ಎಂದರು.

ಏಷ್ಯಾ ಹಾಗೂ ನಮ್ಮ ದೇಶಗಳಲ್ಲಿ ಮಾತ್ರ ಬಿಸಿ ಬಿಸಿ ಆಹಾರ ತಿನ್ನುತ್ತೇವೆ. ಉಳಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಂಕ್ ಆಹಾರ, ಬ್ರೆಡ್, ಫಾಸ್ಟ್ ಫುಡ್ ಸೇವನೆ ಮಾಡುತ್ತಾರೆ. ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ, ವಿದೇಶಗಳಿಗೆ ರಫ್ತು ಮಾಡುವ ಶಕ್ತಿ ಪಡೆದಿದ್ದೇವೆ. ಗುಜರಾತಿಗಿಂತ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಯೋಜನೆಗಳು ಜನಪರ ಕಾರ್ಯಕ್ರಮವಾಗಿದ್ದು, ದೇಶಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Afghanistan-Pakistan War: ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ: ಕತಾರ್ ವಿದೇಶಾಂಗ ಸಚಿವಾಲಯ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾ.ಪಂ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಸ್ವತ್ತು ಸೌಲಭ್ಯ..!

ಗುತ್ತಿಗೆದಾರರು ಬಾಕಿ ಬಿಲ್ ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ DCM ಡಿಕೆ.ಶಿವಕುಮಾರ್ ಅವರೇ?

ಬಿಲ್​ ಕ್ಲಿಯರ್'ಗೆ ಗುತ್ತಿಗೆದಾರರ ಆಗ್ರಹ: DCM ಡಿಕೆ.ಶಿವಕುಮಾರ್ ಮಧ್ಯಪ್ರವೇಶ, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವ ಭರವಸೆ

ನಾನು ಮೂಲಭೂತವಾದದ ವಿರೋಧಿಯೇ ಹೊರತು ಯಾವುದೇ ಧರ್ಮಶ್ರದ್ದೆಯ ವಿರೋಧಿಯಲ್ಲ: ಪ್ರಿಯಾಂಕ್ ಖರ್ಗೆ

SCROLL FOR NEXT