ಬೆಂಗಳೂರು: ಕಾಂಗ್ರೆಸ್ ಶಾಸಕ ಆರ್‌ವಿ ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ - II (ಕೆಎಆರ್‌ಸಿ-II), ನಿಗಮ-ಮಂಡಳಿಗಳು, ಸಂಸ್ಥೆ ಮತ್ತು ಪ್ರಾಧಿಕಾರಗಳ ರದ್ದು, ಹಾಗೂ ವಿಲೀನ ಸೇರಿದಂತೆ 449 ಹೊಸ ಶಿಫಾರಸುಗಳೊಂದಿಗೆ ತನ್ನ ಒಂಬತ್ತನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
ವಿಧಾನಸೌಧದಲ್ಲಿ ಗುರುವಾರ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು.
ವರದಿ ಸಲ್ಲಿಸಿದ ಬಳಿಕ ಮಾತನಾಡಿದ ದೇಶಪಾಂಡೆ ಅವರು, ರಾಜ್ಯದ 148 ನಿಗಮ-ಮಂಡಳಿಗಳ ಪೈಕಿ 82 ಸಂಸ್ಥೆಗಳನ್ನು ಪರಿಶೀಲನೆಗೊಳಪಡಿಸಲಾಗಿದೆ. 5 ವರ್ಷಗಳ ಆರ್ಥಿಕ ವ್ಯವಹಾರ, ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಂಯಮ ಮಂಡಳಿ, ಸಹಕಾರಿ ಕೋಳಿ ಸಾಕಣೆ ಒಕ್ಕೂಟ, ಕರ್ನಾಟಕ ಪಲ್ ವುಡ್ ಲಿಮಿಟೆಡ್, ರಾಜ್ಯ ಆಗೋ-ಕಾರ್ನ್ ಪ್ರಾಡಕ್‌ಟ್ಸ್ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸಸ್ ಲಿಮಿಟೆಡ್ ಮತ್ತು ಆಗೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್ ಮುಚ್ಚುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಜೊತೆಗೆ ಸದ್ಯ ಅವಶ್ಯಕತೆಯಿಲ್ಲದ 9 ಸರ್ಕಾರಿ ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮ- ಮಂಡಳಿಗಳೊಂದಿಗೆ ವಿಲೀನಕ್ಕೆ ತಿಳಿಸಲಾಗಿದೆ. ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಕೈಗಾರಿಕೆ ನಿಗಮವನ್ನು ರೇಷ್ಮೆ ಮಾರುಕಟ್ಟೆ ಮಂಡಳಿ, ಆಹಾರ ಕರ್ನಾಟಕ ಲಿಮಿಟೆಡ್‌ನ್ನು ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ತುರ್ತು ನಿಗಮ, ಬೆಂಗಳೂರು ಸಬ್ ಅರ್ಬನ್ ರೈಲು ಸಂಸ್ಥೆಯನ್ನು ಕರ್ನಾಟಕ ರೈಲು ಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮೈಸೂರು ಕ್ರೋಮ್ ಟ್ಯಾನಿಂಗ್ ಸಂಸ್ಥೆಯನ್ನು ಎಂಎಸ್‌ಐಎಲ್ ನೊಂದಿಗೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮವನ್ನು ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ), ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)ಗಳನು ಸಂಬಂಧಿಸಿದ ನೀರಾವರಿ ನಿಗಮ ಗಳೊಂದಿಗೆ ವಿಲೀನಕ್ಕೆ ವರದಿಯಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.
ಭೂಸ್ವಾಧೀನಕ್ಕೆ ಸಂಬಂಧಿಸಿ ಎಲ್ಲ ಕಾಯ್ದೆಯಲ್ಲಿ ಏಕರೂಪತೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಅದಕ್ಕಾಗಿ ಕೆಐಎಡಿಬಿ ಕಾಯ್ದೆ, ಬಿಡಿಎ ಕಾಯ್ದೆ, ಕೆಎಚ್‌ಬಿ ಕಾಯ್ದೆ, ಕೊಳಗೇರಿ ಪ್ರದೇಶಗಳ ಕಾಯ್ದೆ, ನೀರಾವರಿ ಕಾಯ್ದೆಗಳಲ್ಲಿನ ವ್ಯತಿರಿಕ್ತ ನಿಬಂಧನೆಗಳನ್ನು ಪರಿಶೀಲಿಸಬೇಕು ಹಾಗೂ ಅವುಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ತಿದ್ದುಪಡಿ ತರಬೇಕು. ಅದರಲ್ಲೂ ಕೇಂದ್ರ ಕಾಯ್ದೆಯ ಅಂಶಗಳನ್ನು ಅಳವಡಿಸಿಕೊ ಳ್ಳಬೇಕುಎಂದು ಆಯೋಗ ಶಿಫಾರಸುಮಾಡಿದೆ ಎಂದು ತಿಳಿಸಿದರು.
ಭೂಸ್ವಾಧೀನ ವಿಳಂಬ ಮತ್ತು ಗೊಂದಲ ಗಳನ್ನು ತಡೆಯಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭೂಸ್ವಾಧೀನ ಅಧಿ ಕಾರಿಗಳನ್ನು ವರ್ಗಾಯಿಸಬಾರದು. ಅವಶ್ಯವಿ ರುವ ಸಹಾಯಕ ಸಿಬ್ಬಂದಿಯನ್ನು ಮಂಜೂರು ಮಾಡಬೇಕು. ಭೂಸ್ವಾಧೀನ ದಾಖಲೆಯನ್ನು ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸ ಬೇಕು, ಕಾಲಮಿತಿಯಲ್ಲಿ ಪರಿಹಾರ ಪಾವತಿ ಮೇಲ್ವಿಚಾರಣೆಗೆ ಒಂದೇ ಪೋರ್ಟಲ್ ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಗುಣಮಟ್ಟ ಭರವಸೆ ವಿಭಾಗವನ್ನು ಬಲಗೊಳಿಸಬೇಕು. ತಾಂತ್ರಿಕ ಸಿಬ್ಬಂದಿ, ಗುಮಾಸ್ತರನ್ನು ನಿಯೋಜಿಸಬೇಕು. ಜತೆಗೆ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಗುಣಮಟ್ಟ ಮೇಲ್ವಿಚಾರಣೆಗೆ 500 ಎಂಜಿನಿಯರ್‌ಗಳನ್ನು ನೇಮಿಸಬೇಕು, ಗ್ರಾಪಂ ಸೇರಿದಂತೆ 20 ಸರ್ಕಾರಿ ಕಚೇರಿಗಳ ಸಂಪರ್ಕ ಕಲ್ಪಿಸಲು ಕೆ-ಸ್ವಾನ್ 3.0 ಅನುಷ್ಠಾನ ಮಾಡಬೇಕು. ರಾಜ್ಯ ದತ್ತಾಂಶ ಕೇಂದ್ರ ವಿಸ್ತರಿಸಿ, ಆಧುನಿಕರಿಸಲು 250 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಬೇಕು ಎಂದರು.