ಬೆಂಗಳೂರು: ಬೆಂಗಳೂರಿನ ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ಕಳೆದ 8 ದಿನಗಳಿಂದ ಪ್ರೇಯಸಿ ಜೊತೆ ತಂಗಿದ್ದ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪುತ್ತೂರು ಮೂಲದ 20 ವರ್ಷದ ತಕ್ಷಿತ್ ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಆದರೆ ತಕ್ಷಿತ್ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ತಕ್ಷಿತ್ ಸಾವಿಗೂ ಮುನ್ನ ಆತನ ಜೊತೆಗಿದ್ದ ಯುವತಿ ಲಾಡ್ಜ್‌ನಿಂದ ಹೊರಹೋಗಿದ್ದಳು. ಸದ್ಯ ಯುಡಿಆರ್ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ ಎಂಟು ದಿನಗಳಿಂದ ಜೋಡಿ ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿ ಊಟ ತರಿಸಿಕೊಂಡು ತಿಂದಿದ್ದಾರೆ. ಆದರೆ ನಿನ್ನೆ ಊಟದ ನಂತರ ಇಬ್ಬರಿಗೂ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದಾರೆ. ಊಟಕ್ಕೆ ಬೇಕಂತಲೆ ವಿಷ ಬೆರಸಿ ತಿಂದಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಫುಡ್ ಪಾಯ್ಸಿನ್ ನಿಂದ ಸುಧಾರಿಸಿಕೊಂಡಿದ್ದು ಯುವತಿ ನಿನ್ನೆ ರೂಂನಿಂದ ಹೊರಹೋದ ಬಳಿಕ ಕೋಣೆಯನ್ನು ಪರಿಶೀಲಿಸಲು ಹೋಟೆಲ್ ಸಿಬ್ಬಂದಿ ಹೋಗಿದ್ದಾಗ ತಕ್ಷಿತ್ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಎಲ್ಲಾ ಆಯಾಮಗಳೂ ತನಿಖೆ ನಡೆಸುತ್ತಿದ್ದಾರೆ.