ನಂಜನಗೂಡು: ಕೆರೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತರನ್ನು ಬದನವಾಳು ಗ್ರಾಮದ ಮೋಹಿತ್ (8) ಆರ್ಯ (9) ಎಂದು ಗುರುತಿಸಲಾಗಿದೆ. ಮೋಹಿತ್ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಆರ್ಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ದಸರಾ ರಜೆ ಹಿನ್ನೆಲೆಯಲ್ಲಿ ಮಕ್ಕಳು ಸೈಕಲ್ ಮೂಲಕ ಕೆರೆಗೆ ತೆರಳಿದ್ದಾರೆ. ತದನಂತರ ಕೆರೆ ಬಳಿ ಬಟ್ಟೆ ಬಿಚ್ಚಿ ಈಜಲು ಇಳಿದಿದ್ದಾರೆ. ಈ ವೇಳೆ ಸುಳಿಗೆ ಸಿಲುಕಿ ಹೊರಗೆ ಬಾರದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕವಲಂದೆ ಪೊಲೀಸ್ ಠಾಣೆ ಪೊಲೀಸರು ಮೃತ ಬಾಲಕರ ಶವವನ್ನು ಕೆರೆಯಿಂದ ಹೊರಗೆ ತಂದಿದ್ದಾರೆ. ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಜಿ ಶಾಸಕ ಬಿ. ಹರ್ಷವರ್ಧನ್ ನಂಜನಗೂಡು ಸಾವ೯ಜನಿಕ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.