ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 2025ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಕಲಾವಿದ ಅನಂತ್ ನಾಗ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ್ ರಘು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲಾವಿದರಿಬ್ಬರಿಗೆ ಗೌರವ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅವರು ಚಿತ್ರರಂಗದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬೇರೆ ಯಾವುದಾದರೂ ಸಂದರ್ಭದಲ್ಲಿ ನಾನು ಫಿಲ್ಮ್ ಚೇಂಬರ್ಗೆ ಬರುತ್ತೇನೆ. ಇವರ ಮೇಲೆಲ್ಲ ನನಗೆ ಕೋಪ ಇದೆ. ಇರಲಿ, ಈಗ ನಾನು ಅದರ ಬಗ್ಗೆ ಮಾತಾಡೋಕೆ ಹೋಗಲ್ಲ ಎಂದರು.
ಇತ್ತೀಚೆಗೆ ಸಿನಿಮಾ ವಿತರಕರು, ಪ್ರದರ್ಶಕರು ಭೇಟಿ ಮಾಡಿ ಅನೇಕ ವಿಚಾರ ಚರ್ಚೆ ಮಾಡಿದರು. ಸಿನಿಮಾ ರಂಗ ಬೆಳೆಯುತ್ತಿದೆ. ನಟರು, ನಿರ್ಮಾಪಕರು 50 ಜನ ಇದ್ದರೂ ಆ ಸಿನಿಮಾದಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿರುತ್ತಾರೆ. ಕಲೆ ಯಾರಪ್ಪನ ಮನೆ ಸ್ವತ್ತಲ್ಲ, ನಾವು ಉಳಿಸಿ ಬೆಳೆಸಿಕೊಂಡ ಹೋಗಬೇಕು ಎಂದರು.
ಬಿಗ್ ಬಾಸ್ ಕಾರ್ಯಕ್ರಮ ಸಮಸ್ಯೆ
ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸಬೇಕಾಯಿತು. ಅವರು ಯಾವ ಕಾರಣ ಕೊಟ್ಟರೋ ಗೊತ್ತಿಲ್ಲ. ಆದರೆ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ. ಸಾರ್ವಜನಿಕರ ಗಮನ ಇರುತ್ತದೆ ಎಂಬ ಅರಿವು ನಮಗಿದೆ. ಹೀಗಾಗಿ ಅಧಿಕಾರಿಗಳಿಗೆ ಹೇಳಿ ಮತ್ತೆ ಅವಕಾಶ ಮಾಡಿಕೊಟ್ಟೆ. ಅದೇನೇ ಇದ್ದರೂ ಉದ್ಯಮ ನಡೆಯುತ್ತಿದೆ, ಸ್ಪರ್ಧೆ ಹೆಚ್ಚಾಗಿದೆ. ತಂತ್ರಜ್ಞಾನ ಬೆಳೆಯುತ್ತಿದೆ ಎಂದರು.