ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕ ಅಭಿಷೇಕ್ ತನ್ನ ಖಾಸಗಿ ವಿಡಿಯೋ ಬಳಸಿ ನಾಲ್ವರು ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು. ಈ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಮಂಗಳೂರಿನ ಕದ್ರಿ ಪೊಲೀಸರು ಯುವತಿಯೋರ್ವಳನನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಪರಪ್ಪಾಡಿ ನಿವಾಸಿ ಅಭಿಷೇಕ್ ಡೆತ್ ನೋಟ್ ನಲ್ಲಿ ನಿರೀಕ್ಷಾ ಎಂಬಾಕೆಯ ಹೆಸರು ಬರೆದಿದ್ದು ಸಾವಿಗೆ ಶರಣಾಗಿದ್ದನು. ಹೀಗಾಗಿ ಪೊಲೀಸರು ಚಿಕ್ಕಮಗಳೂರಿನ ನಿರೀಕ್ಷಾಳನ್ನು ಬಂಧಿಸಿದ್ದಾರೆ. ನಿರೀಕ್ಷಾ ಹಾಗೂ ಇನ್ನಿಬ್ಬರು ಯುವತಿಯರು ಸೇರಿಕೊಂಡು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ನಿರೀಕ್ಷಾ ತನ್ನ ರೂಮ್ ಮೇಟ್ ಯುವತಿಯರು ಬಟ್ಟೆ ಬದಲಿಸುವುದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇನ್ನು ನಿರೀಕ್ಷಾ ಈ ವಿಡಿಯೋಗಳನ್ನು ಅಭಿಷೇಕ್ ಗೆ ಕಳುಹಿಸಿದ್ದಳು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಷೇಕ್ truth group ಎಂಬ ವಾಟ್ಸಾಪ್ ಗುಂಪು ರಚಿಸಿ ಅದರಲ್ಲಿ ಈ ಯುವತಿಯರ ವಿಡಿಯೋ ಸೇರಿದಂತೆ ಕೆಲವು ವಿಡಿಯೋಗಳನ್ನು ಹಾಕಿದ್ದನು. ಈ ಘಟನೆಯಿಂದ ಆಘಾತಗೊಂಡ ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕದ್ರಿ ಪೊಲೀಸರು ನಿರೀಕ್ಷಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಭಿಷೇಕ್ ಡೆತ್ ನೋಟ್ ನಲ್ಲಿ ಏನಿತ್ತು?
ಡೆತ್ ನೋಟ್ ನಲ್ಲಿ ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆಯ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್ ,ರಾಹುಲ್ ಹಾಗೂ ತಸ್ಲೀಮ್ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಅವರು ಹಣಕ್ಕಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಅಂತಲೂ ದೂರಿದ್ದನು.