ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿದ ಪ್ರವಾಹ ಪರಿಹಾರ ಹಂಚಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಆಡಳಿತವಿರುವ ರಾಜ್ಯಗಳು ನಿರಂತರವಾಗಿ ಹೆಚ್ಚಿನ ಹಣವನ್ನು ಪಡೆಯುತ್ತಿವೆ. ಆದರೆ, ಎನ್‌ಡಿಎ ಅಥವಾ ಕೇಸರಿ ಪಕ್ಷದ ಸರ್ಕಾರವಿಲ್ಲದ ರಾಜ್ಯಗಳು 'ಯಾವಾಗಲೂ ಕಡಿಮೆ ಹಣವನ್ನು ಪಡೆಯುತ್ತವೆ' ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಹೊಂದಿರುವ ಖರ್ಗೆ, ರಾಜ್ಯದಲ್ಲಿ ವರದಿಯಾಗಿರುವ ಭಾರಿ ನಷ್ಟವನ್ನು ಗಮನಿಸಿದರೆ, ಕೇಂದ್ರದಿಂದ ಬಿಡುಗಡೆಯಾದ ಹಣವು ಸಾಕಾಗುವುದಿಲ್ಲ ಎಂದು ಹೇಳಿದರು.
2025-26ನೇ ಸಾಲಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಅಡಿ ಎರಡನೇ ಕಂತಾಗಿ 1,950.80 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅನುಮೋದನೆ ನೀಡಿದ್ದಾರೆ.
ಈ ವರ್ಷದ ನೈಋತ್ಯ ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ತ್ವರಿತವಾಗಿ ನೆರವು ನೀಡಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ 384.40 ಕೋಟಿ ರೂ.ಗಳು ಮತ್ತು ಮಹಾರಾಷ್ಟ್ರಕ್ಕೆ 1,566.40 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
'ನಾವು ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಒಂದಾಗಿದ್ದರೂ, ನಾವು ಅತಿ ಹೆಚ್ಚು ಐಟಿ (ಆದಾಯ ತೆರಿಗೆ) ಪಾವತಿಸುವ ರಾಜ್ಯವಾಗಿದ್ದರೂ, ಐಟಿ (ಮಾಹಿತಿ ತಂತ್ರಜ್ಞಾನ) ರಫ್ತುಗಳಲ್ಲಿ ನಾವು ಮೊದಲ ಸ್ಥಾನದಲ್ಲಿದ್ದರೂ, ಕೇಂದ್ರ ಸರ್ಕಾರವು ನಮಗೆ ಸಾಕಷ್ಟು ಹಣವನ್ನು ನೀಡದೆ ನಮ್ಮನ್ನು ಹತ್ತಿಕ್ಕುವುದು ನಿಯಮಿತ ಅಭ್ಯಾಸವಾಗುತ್ತಿದೆ. ಜಿಡಿಪಿಗೆ ನಮ್ಮ ಕೊಡುಗೆ ಶೇ 8.9 ಕ್ಕಿಂತ ಹೆಚ್ಚಿದೆ' ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಧಿಗಳ ವಿಕೇಂದ್ರೀಕರಣ, ತೆರಿಗೆಗಳ ವಿಕೇಂದ್ರೀಕರಣದ ವಿಷಯಕ್ಕೆ ಬಂದಾಗ ಕರ್ನಾಟಕಕ್ಕೆ ಯಾವಾಗಲೂ ಅನ್ಯಾಯವಾಗಿದೆ ಎಂದು ಹೇಳಿದರು.
'ಈಗಲೂ ನಿಯಮಗಳ ಪ್ರಕಾರ, ಬಿಡುಗಡೆ ಮಾಡಲಾದ ಪರಿಹಾರ ಸಾಕಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಭಾರಿ ಪ್ರಮಾಣದ ನಷ್ಟ ವರದಿಯಾಗಿದೆ. ಬಿಜೆಪಿ ಆಢಳಿತವಿರುವ ರಾಜ್ಯಗಳು ಹೆಚ್ಚಿನದನ್ನು ಪಡೆದರೂ, ಎನ್‌ಡಿಎ ಅಥವಾ ಬಿಜೆಪಿಯೊಂದಿಗೆ ಸಂಬಂಧ ಇಲ್ಲದ ರಾಜ್ಯಗಳು ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ಪಡೆಯುತ್ತವೆ' ಎಂದು ಅವರು ಹೇಳಿದರು.
ಈ ವರ್ಷ ಮಳೆ ಮತ್ತು ಪ್ರವಾಹದಿಂದಾಗಿ ಕರ್ನಾಟಕದ ಹಲವಾರು ಭಾಗಗಳಲ್ಲಿ ಜೀವಹಾನಿ, ಆಸ್ತಿಪಾಸ್ತಿ, ಬೆಳೆ ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿದೆ.