ಸಿಎಂ ಸಿದ್ದರಾಮಯ್ಯ 
ರಾಜ್ಯ

ಅನುದಾನ ವಿಚಾರದಲ್ಲಿ ತಾರತಮ್ಯವಿಲ್ಲ; ಮೋದಿ ಜಾಹಿರಾತಿನಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರೂ ನಷ್ಟ; ಸಿಎಂ ಸಿದ್ದರಾಮಯ್ಯ

ದಿನೇಶ್ ಗುಂಡೂರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು.

ಬೆಂಗಳೂರು: ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಮಾಡಲಾಗುವ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್‌ಪೇಟೆ ವಾರ್ಡ್‌ನಲ್ಲಿ 58.44 ಕೋಟಿ ರೂ.ಗಳ ವೈಟ್ ಟಾಪಿಂಗ್ ಮತ್ತು ರಸ್ತೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಮಾತನಾಡಿದರು.

ದಿನೇಶ್ ಗುಂಡೂರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು. ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ‌ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ. ನಾವೊಮ್ಮೆ ಇಲ್ಲಿನ ರಸ್ತೆಗಳ ಅಗಲೀಕರಣದ ಬಗ್ಗೆ ಚಿಂತಿಸಿದ್ದೆವು. ಆದರೆ ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆ ಆಗುತ್ತದೆ ಸರ್ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ.

ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಈ ಸವಾಲನ್ನು ಗೆಲ್ಲಲು ಬೆಂಗಳೂರಿನ‌ ರಸ್ತೆಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುದಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಶಾಸಕರ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

ಈ ವೇಳೆ ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಘೋಷಿಸಿದ 11,300 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರವು 15,000 ಕೋಟಿ ರೂ.ಗಳ ಜಿಎಸ್‌ಟಿ ಪಾಲನ್ನು ಸಹ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಭರವಸೆ ನೀಡಿದ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರದಿದ್ದಕ್ಕಾಗಿ ರಾಜ್ಯದ ಬಿಜೆಪಿ ನಾಯಕರನ್ನು ಟೀಕಿಸಿದರು.

ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಅನುದಾನವಾಗಿ ಮೋದಿ ಸರ್ಕಾರ 11,400 ಕೋಟಿ ರೂ.ಗಳನ್ನು ಘೋಷಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿದ್ದರು. ಆದರೆ ಕೇಂದ್ರವು ರಾಜ್ಯಕ್ಕೆ ಒಂದು ರೂಪಾಯಿಯನ್ನೂ ನೀಡಲಿಲ್ಲ ಎಂದು ಕಿಡಿಕಾರಿದರು.

ಬೆಂಗಳೂರಿನ ಮೆಟ್ರೋಗೆ ಶೇ.87 ರಷ್ಟು ಹಣ ಕೊಡುವುದು ನಾವೇ. ಅಂದರೆ ರಾಜ್ಯದ ಜನತೆಯ ಶೇ.87 ರಷ್ಟು ಹಣದಲ್ಲಿ ಮೆಟ್ರೋ ಆಗಿದೆ. ಆದರೆ ಬಿಜೆಪಿಯವರು ಮೆಟ್ರೋ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಾರೆ. ಜಿಎಸ್‌ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ಮೋದಿ ಅವರು. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ "ದೀಪಾವಳಿ ಗಿಫ್ಟ್" ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ.

"ದೀಪಾವಳಿ ಗಿಫ್ಟ್" ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ.ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ನಮ್ಮ ಸರ್ಕಾರದ ಕಾಲದಲ್ಲೇ ಆಗಿರುವಂಥವು.

ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಒಂದು ಲೇಯರ್ ಟಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಇಲ್ಲಿಯೇ ಸೂಚನೆ ನೀಡುತ್ತಿದ್ದೇನೆ. ಹೊಸ ಹೊಸ ಔಟರ್ ರಿಂಗ್ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕ್ಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ 1,20,000 ಕೋಟಿ ರೂ. ನೀಡುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು. ದಿನೇಶ್ ಗುಂಡೂರಾವ್ ಅವರಂಥ ಶಾಸಕ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಂದೆಯ ರಾಜಕೀಯ ಜೀವನ ಮುಗಿಯಿತು; ಸತೀಶ್ ಜಾರಕಿಹೊಳಿ 'ಉತ್ತರಾಧಿಕಾರಿ': ಯತೀಂದ್ರ ಸಿದ್ದರಾಮಯ್ಯ ಹೇಳಿಕೆ; ಡಿಕೆಶಿ ಬಣಕ್ಕೆ ಶಾಕ್!

ದೀಪ ಹಚ್ಚೋಣ, ಇದು ಬೆಳಕಿನ ಅನ್ವೇಷಣೆಯೆಂಬ ಅನಂತ ಯಾನ (ತೆರೆದ ಕಿಟಕಿ)

BiggBoss Kannada 12: 'ತಪ್ಪು ಮಾಡ್ಬಿಟ್ಟೆ.. ಅಮ್ಮ-ಅಣ್ಣಂಗೆ ನನ್ನಿಂದ ಅವಮಾನ..'; ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಇತಿಹಾಸ ಬರೆದ ಕಾಂತಾರ ಚಾಪ್ಟರ್ 1; ಇಂಗ್ಲೀಷ್ ಗೂ ಡಬ್ ಆದ ಭಾರತದ ಮೊಟ್ಟ ಮೊದಲ ಚಿತ್ರ!

ರಷ್ಯಾ-ಭಾರತ ಸ್ನೇಹ ಕಡಿತಕ್ಕೆ ಅಮೆರಿಕ ಮುಂದು; ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಸಾಧ್ಯತೆ!

SCROLL FOR NEXT