ಮೈಸೂರು: ಅಕ್ರಮ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಐವರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಈ ಗ್ಯಾಂಗ್ ಕಾರ್ಯಾಚರಣೆ ನಡೆಸುತಿತ್ತು. ಅಕ್ರಮ ಲಿಂಗ ಪತ್ತೆ ಪರೀಕ್ಷೆ ಮತ್ತು ಭ್ರೂಣ ಹತ್ಯೆಯ ಬಗ್ಗೆ ಸುಳಿವು ಸಿಕ್ಕಿ ನಂತರ ವರುಣಾದ ಬನ್ನೂರು ಹೆದ್ದಾರಿಯ ಹುನಗನಹಳ್ಳಿ ಗ್ರಾಮದ ತೋಟದ ಮನೆ ಮೇಲೆ ಬುಧವಾರ ಸಂಜೆ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ವಿವರಗಳನ್ನು ದಿನೇಶ್ ಗುಂಡೂರಾವ್, ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಬನ್ನೂರು ಹೆದ್ದಾರಿ ಸಮೀಪದ ಹುನಗನಹಳ್ಳಿ ಫಾರ್ಮ್ ಹೌಸ್ ನಲ್ಲಿ ಭ್ರೂಣ ಲಿಂಗ ಪತ್ತೆ ಕಾರ್ಯ ನಡೆಸುತ್ತಿದದ್ದು ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ರಹಸ್ಯ ಕಾರ್ಯಾಚರಣೆಯ ಮೂಲಕ ಭ್ರೂಣಹತ್ಯೆ ಹಂತಕರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಗರ್ಭಿಣಿ ಮಹಿಳೆಯ ಸಹಾಯದಿಂದ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಿರುವುದು ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಭ್ರೂಣ ಲಿಂಗ ಪತ್ತೆ ಪರೀಕ್ಷೆಗಾಗಿ ನಾಲ್ವರು ಗರ್ಭಿಣಿಯರು ಸ್ಥಳದಲ್ಲಿ ಇದದ್ದು ಕಂಡುಬಂದಿದೆ. ಸ್ಯಾನಿಂಗ್ ಯಂತ್ರೊಂದು ಪತ್ತೆಯಾಗಿದೆ.
ಪ್ರಸವಪೂರ್ವ ಲಿಂಗ ಪತ್ತೆ ಪರೀಕ್ಷೆ (PCPNDT) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಆರೋಗ್ಯ ಇಲಾಖೆ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು ಆಗಿದ್ದು, ಜನರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಾಜವು ಇದನ್ನು ಅರಿತು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ಭ್ರೂಣಹತ್ಯೆ ವಿರುದ್ಧ ಸಹಕಾರ ನೀಡುವವರಿಗೆ ಆರೋಗ್ಯ ಇಲಾಖೆ ಸದಾ ಜೊತೆಗಿರುತ್ತದೆ. ಎಷ್ಟೇ ದೊಡ್ಡವರಾದರೂ ಹೆಣ್ಣು ಭ್ರೂಣಹತ್ಯೆ ತೊಲಗಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದ್ದಾರೆ.