ಬೆಂಗಳೂರು: ಸಾಲಗಾರರು ಬ್ಯಾಂಕಿನಿಂದ ಸಾಲ ಪಡೆಯಲು ಒತ್ತೆ ಇಟ್ಟ ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಜಾರಿ ನಿರ್ದೇಶನಾಲಯ (ED) ಹೊರಡಿಸಿದ ಮುಟ್ಟುಗೋಲು ಆದೇಶ ಮತ್ತು ನ್ಯಾಯನಿರ್ಣಯ ಪ್ರಾಧಿಕಾರ ಹೊರಡಿಸಿದ್ದ ದೃಢೀಕರಣ ಆದೇಶ ರದ್ದುಗೊಳಿಸಿ ಮೇಲ್ಮನವಿ ನ್ಯಾಯಮಂಡಳಿ ಹೊರಡಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಪ್ರಾಥಮಿಕ ತನಿಖೆಯಲ್ಲಿ ಅಪರಾಧದ ಆದಾಯದಿಂದ ಸ್ವಾಧೀನಪಡಿಸಿಕೊಂಡ ಆಸ್ತಿಗಳು ಎಂದು ಕಂಡುಬಂದರೆ ಮಾತ್ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) ಅಡಿಯಲ್ಲಿ ಮುಟ್ಟುಗೋಲು ಪ್ರಕ್ರಿಯೆಗೆ ಒಳಪಡಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಸಾಲಗಳ ವಿರುದ್ಧ ಮೇಲಾಧಾರ ಭದ್ರತೆಯಾಗಿ ನೀಡಲಾಗುವ ಆಸ್ತಿಗಳು PMLAಯ ಸೆಕ್ಷನ್ 2(u) ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧದ ಆದಾಯ ಎಂದು ವಿವರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಈ ಆಸ್ತಿಗಳನ್ನು ಅಪರಾಧದ ಆದಾಯದಿಂದ ಸ್ವಾಧೀನಪಡಿಸಿಕೊಂಡಿಲ್ಲ ಮತ್ತು ಕೇಂದ್ರವು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ, ನ್ಯಾಯಮೂರ್ತಿ ಡಿ ಕೆ ಸಿಂಗ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ ಅವರ ವಿಭಾಗೀಯ ಪೀಠ, ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.