ಬೆಂಗಳೂರು: ತಮ್ಮ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ಅಧೀನ ನ್ಯಾಯಾಲಯದ ಕ್ರಮ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಕರಣದ ಸಹ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ನಿನ್ನೆ ಗುರುವಾರ ತೀರ್ಪು ಕಾಯ್ದಿರಿಸಿತು.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಅರ್ಜಿದಾರರ ಪರ ವಕೀಲರ ವಾದ ಮತ್ತು ಸಿಐಡಿ ತನಿಖಾಧಿಕಾರಿ ಪರ ವಿಶೇಷ ಅಭಿಯೋಜಕರ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಪೀಠ ತೀರ್ಪು ಕಾಯ್ದಿರಿಸಿತು.
ಯಡಿಯೂರಪ್ಪ ಪರ ವಕೀಲರ ವಾದವೇನು?
ಯಡಿಯೂರಪ್ಪ ಪರ ವಕೀಲರು, ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಪರಿಗಣಿಸಿ ಅಧೀನ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದೆ. ಈ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸೂಕ್ತವಾಗಿ ವಿವೇಚನೆ ಬಳಸಿಲ್ಲ ಎಂದು ಆಕ್ಷೇಪಿಸಿದರು.ಆಡಿಯೋ ರೆಕಾರ್ಡಿಂಗ್ ಅನ್ನೂ ನ್ಯಾಯಾಲಯ ಪರಿಗಣಿಸಿಲ್ಲ. ಹೊಸದಾಗಿ ಕಾಗ್ನಿಜೆನ್ಸ್ ಪಡೆದಿರುವ ಆದೇಶ ಸರಿಯಿಲ್ಲವೆಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.
ಸರ್ಕಾರಿ ಅಭಿಯೋಜಕರ ವಾದವೇನು?
ವಿಶೇಷ ಸರ್ಕಾರಿ ಅಭಿಯೋಜಕರು, ಸಂತ್ರಸ್ತೆಯ ತಾಯಿ ಮತ್ತು ಯಡಿಯೂರಪ್ಪ ನಡುವಿನ ಆಡಿಯೊ ರೆಕಾರ್ಡಿಂಗ್ ನಾಶಪಡಿಸಲಾಗಿದೆ. ಸಂತ್ರಸ್ತೆಯ ತಾಯಿಯ ಮೊಬೈಲ್ ಕಸಿದು ಸಹ ಆರೋಪಿ ಅರುಣ್ ಎಂಬವರು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಆಡಿಯೊ ರೆಕಾರ್ಡಿಂಗ್ ಡಿಲೀಟ್ ಮಾಡಿಸಿದ್ದಾರೆ. ಆದರೆ, ಸಂತ್ರಸ್ತೆ ಮೊಬೈಲ್‌ನಲ್ಲಿ ಇರುವ ಅಸಲಿ ಆಡಿಯೊದಲ್ಲಿನ ಧ್ವನಿ ಯಡಿಯೂರಪ್ಪರದ್ದಾಗಿದೆ ಎಂದು ಎಫ್‌ಎಸ್‌ಎಲ್ ವರದಿ ಖಚಿತಪಡಿಸಿದೆ, ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಏನಿದು ಪ್ರಕರಣ?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಬೆಂಗಳೂರಿನ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024 ರ ಮಾರ್ಚ್ನಲ್ಲಿ ಕೇಳಿಬಂದಿತ್ತು.
ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು.
ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದರು. ಈ ನಡುವೆ, ಪ್ರಕರಣದ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.