ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಸಮೀಪ ಖಾಸಗಿ ಬಸ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ 6 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ದುರ್ಘಟನೆಯಲ್ಲಿ ಕರ್ನಾಟಕದ ನಿವಾಸಿಗಳಾದ ಫಿಲೋಮೆನ್ ಬೇಬಿ (64) ಮತ್ತು ಕಿಶೋರ್ ಕುಮಾರ್ (41) ಸಾವನ್ನಪ್ಪಿದ್ದಾರೆ,
ಇನ್ನು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಹ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ರಮೇಶ್ (35), ಅವರ ಪತ್ನಿ ಅನುಷಾ (30) ಮತ್ತು ಅವರ ಮಕ್ಕಳಾದ ಮನೀಶ್ (12) ಮತ್ತು ಮಾನ್ವಿತಾ (10) ಎಂದು ಗುರುತಿಸಲಾಗಿದೆ. ನೆಲ್ಲೂರು ಮೂಲದ ರಮೇಶ್ ಸುಮಾರು 15 ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಇನ್ನೂ ನಾಲ್ಕು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳಿದ್ದರೂ, ಯಾವುದೇ ಅಧಿಕೃತ ಮೂಲಗಳು ಇದನ್ನು ದೃಢಪಡಿಸಿಲ್ಲ.
ಘಟನೆಯಲ್ಲಿ ರಾಜ್ಯದ ಇತರ ಐವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಹರಿಕಾ ಮತ್ತು ಮೊಹಮ್ಮದ್ ಖೈಜರ್, ಬಳ್ಳಾರಿಯ ಶಿವ, ಮತ್ತು ಬೀದರ್‌ನ ಪಂಕಜ್ ಮತ್ತು ಆಕಾಶ್ ಘಟನೆಯಲ್ಲಿ ಗಾಯಗೊಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಿಕ ಹೇಳಿಕೆ ನೀಡಿರುವ ಬದುಕುಳಿದ ಹೈದರಾಬಾದ್‌ನಿಂದ ನಗರಕ್ಕೆ ಪ್ರಯಾಣಿಸುತ್ತಿದ್ದ ಬಣ್ಣ ತಯಾರಿಕಾ ಕಂಪನಿಯಲ್ಲಿ ಮಾರಾಟಗಾರರಾಗಿರುವ ಆಕಾಶ್ ಅವರು ಭಯಾನಕ ಕ್ಷಣವನ್ನು ವಿವರಿಸಿದ್ದಾರೆ.
ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಇಡೀ ಬಸ್'ನ್ನು ಆವರಿಸಿತ್ತು. ಈ ವೇಳೆ ಕಿಟಕಿ ಗಾಜುಗಳನ್ನು ಹೊಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಆದರೆ, ಯಾರನ್ನೂ ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಈಗಲೂ ಘಟನೆ ಬಗ್ಗೆ ಯೋಚಿಸಿದರೆ ನಡುಕ ಬರುತ್ತದೆ. ನಾನು ರಾತ್ರಿ 10.30 ರ ಸುಮಾರಿಗೆ ಬಸ್ ಹತ್ತಿದೆ. ಈ ಘಟನೆ ಬೆಳಗಿನ ಜಾವ 2.40 ರ ನಂತರ ಸಂಭವಿಸಿದೆ. ನಾನು ಗಾಢ ನಿದ್ರೆಯಲ್ಲಿದ್ದೆ. ಸಹ ಪ್ರಯಾಣಿಕರೊಬ್ಬರು ನಮ್ಮಲ್ಲಿ ಹೆಚ್ಚಿನವರನ್ನು ಎಬ್ಬಿಸಿದರು.
ಅಪಘಾತದ ಸಂಭವಿಸಿದಾಗ ದೊಡ್ಡ ಶಬ್ದ ನಮಗೆ ಕೇಳಿಸಿತು. ಆದರೆ, ಬಸ್ ಚಾಲಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆಂದು ನಮಗೆ ಯಾರಿಗೂ ತಿಳಿದಿರಲಿಲ್ಲ. ಎಡಭಾಗದ ಬಾಗಿಲು ಮತ್ತು ಬಸ್ಸಿನ ಮುಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿತ್ತು, ಡೀಸೆಲ್ ರಸ್ತೆಯ ಮೇಲೆ ಚೆಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಚಾಲಕ ಮತ್ತು ಅವನ ಸಹಾಯಕ ಇಬ್ಬರೂ ನೀರು ಎರಚುವ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದರು.
ಚಾಲಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದರೆ ಎಲ್ಲರೂ ಬದುಕುಳಿಯುತ್ತಿದ್ದರು, ಚಾಲಕನ ಬಾಗಿಲಿನ ಗಾಜಿನ ಕಿಟಕಿಯನ್ನು ಒಡೆದು ನಾನು ಕೆಳಗೆ ಹಾರಿದ್ದೆ. ಇತರ ಮೂವರು ಅದೇ ದಾರಿಯಲ್ಲಿ ಬಂದರು. 5-10 ಸೆಕೆಂಡುಗಳಲ್ಲಿ ನಾವು ಹೊರಬಂದೆವು, ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಕ್ಷಣಾಧದಲ್ಲಿ ಬೆಂಕಿ ಇಡೀ ಬಸ್ ಆವರಿಸಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಹಿಂಭಾಗದ ತುರ್ತು ನಿರ್ಗಮನದಿಂದ ಸುಮಾರು 12 ಪ್ರಯಾಣಿಕರು ತಪ್ಪಿಸಿಕೊಂಡಿರಬೇಕು. ಗಾಜು ಒಡೆದು ತೆರೆಯಬೇಕಾಗಿ ಬಂದ ಕಾರಣ ನನಗೆ ಗಾಯಗಳಾದವು. ಇತರರಿಗೆ ಸಹಾಯ ಮಾಡದಕ್ಕಾಗಿ ನನಗೆ ತುಂಬಾ ವಿಷಾದವಿದೆ. ಹಬ್ಬದ ನಂತರ, ನಾನು ಕೆಲಸಕ್ಕಾಗಿ ಬೆಂಗಳೂರಿಗೆ ಹಿಂತಿರುಗುತ್ತಿದ್ದೆ, ಇದು ನನಗೆ ಪುನರ್ಜನ್ಮವಾಗಿದೆ ಎಂದು ಬದುಕುಳಿದ ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾನೆ.
ಆಂಧ್ರಪ್ರದೇಶದ ಚಿತ್ತೂರಿನ ಮತ್ತೊಬ್ಬ ಪ್ರಯಾಣಿಕ ವೇಣು ಗುಂಡಾ ಅವರು ಮಾತನಾಡಿ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ಗಮನಿಸಿದ ನಂತರ ಕೂಡಲೇ ತುರ್ತು ನಿರ್ಗಮನದ ಕಡೆಗೆ ಧಾವಿಸಿ ಗಾಜನ್ನು ಒಡೆಯಲು ಪ್ರಯತ್ನಿಸಿದೆ. ಆದರೆ, ಒಡೆಯಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಪ್ರಯಾಣಿಕ ಗಾಜನ್ನು ಒಡೆದರು. ನಾವಿಬ್ಬರೂ ಸೆಕೆಂಡುಗಳಲ್ಲಿ ಉರಿಯುತ್ತಿದ್ದ ಬಸ್ಸಿನಿಂದ ಹೊರಗೆ ಹಾರಿದೆವು.
ಗಾಜನ್ನು ಒಡೆಯಲು ಬಸ್ ಒಳಗೆ ಯಾವುದೇ ತುರ್ತು ಸುತ್ತಿಗೆ ಇರಲಿಲ್ಲ. ನಾವು ಸುಮಾರು ಒಂದು ಗಂಟೆ ಬಸ್ ಬಳಿ ಇದ್ದೆವು. ಬಸ್ಸಿನಿಂದ ಬರುತ್ತಿದ್ದ ದೊಡ್ಡ ಹೊಗೆಯಿಂದಾಗಿ, ನಮಗೆ ಅದರ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಅದು ಹವಾನಿಯಂತ್ರಿತ ಬಸ್ ಆಗಿದ್ದರಿಂದ, ಎಲ್ಲಾ ಗಾಜುಗಳನ್ನು ಮುಚ್ಚಲಾಗಿತ್ತು. ಹೆಚ್ಚಿನವರು ಒಳಗೆ ಸಿಲುಕಿಕೊಂಡಿದ್ದರು.
ಕೆಲವು ಪ್ರಯಾಣಿಕರು ಸುಟ್ಟಗಾಯಗಳಿಂದ ಚಲಿಸಲು ಸಾಧ್ಯವಾಗದೆ ರಸ್ತೆಯಲ್ಲಿ ಬಿದ್ದಿದ್ದರು. ರಸ್ತೆಯಲ್ಲಿ ಚಲಿಸುತ್ತಿದ್ದ ಮತ್ತೊಂದು ವಾಹನದ ಚಾಲಕ ದಯೆ ತೋರಿ ನನ್ನನ್ನು ಬೆಂಗಳೂರಿನಲ್ಲಿ ಇಳಿಸಿದನು. ಘಟನೆ ವೇಳೆ ಮಳೆ ಬರಲು ಪ್ರಾರಂಭಿಸಿತು. ಮಳೆ ಕೂಡ ದುರ್ಘಟನೆ ತಡೆಯಲು ಸಾಧ್ಯವಾಗಲಿಲ್ಲ. ಬೆಂಕಿ ಹೊತ್ತಿಕೊಂಡಾಗ ಎರಡು ಬಾರಿ ದೊಡ್ಡ ಸ್ಫೋಟ ಸಂಭವಿಸಿದ ಶಬ್ಧ ಕೇಳಿಸಿತು. ಬಹುಶಃ ಟೈರ್‌ಗಳು ಸಿಡಿದಿರಬೇಕು ಎಂದು ಹೇಳಿದ್ದಾರೆ.