ಬೆಂಗಳೂರು: ದಿನಸಿ ವಸ್ತುಗಳ ಡೆಲಿವರಿ ಮಾಡುವ ವೇಳೆ ಬ್ರೆಜಿಲ್ ಮೂಲದ ರೂಪದರ್ಶಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಡೆಲಿವರಿ ಬಾಯ್ ನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ದಿನಸಿ ಡೆಲಿವರಿ ವೇಳೆ ಬ್ರೆಜಿಲಿಯನ್ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 21 ವರ್ಷದ ಡೆಲಿವರಿ ಏಜೆಂಟ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ದೂರಿನಲ್ಲಿ, ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ ಡೆಲಿವರಿ ಏಜೆಂಟ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಅನುಚಿತವಾಗಿ ಸ್ಪರ್ಶಿಸಿದ ಎಂದು ಆರೋಪಿಸಿದ್ದಾರೆ.
ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ಇದೇ ಅಕ್ಟೋಬರ್ 17 ರಂದು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಬ್ರೆಜಿಲ್ ಮೂಲದ ಮಾಡೆಲ್ ಡೆಲಿವರಿ ಆ್ಯಪ್ ಮೂಲಕ ದಿನಸಿ ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಏಜೆಂಟ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ.
ಇದರಿಂದ ಆತಂಕಕ್ಕೀಡಾದ ಬ್ರೆಜಿಲ್ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಡೆಲಿವರಿ ಏಜೆಂಟ್ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಮಾಡೆಲ್ ತನ್ನ ಉದ್ಯೋಗದಾತರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇಲೆ, ನಾವು ಭಾರತೀಯ ನ್ಯಾಯ ಸಂಹಿತಾದ ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಮತ್ತು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲಸದಿಂದ ಕಿತ್ತೊಗೆದ ಡೆಲಿವರಿ ಸಂಸ್ಥೆ
ಇನ್ನು ಡೆಲಿವರಿ ಏಜೆಂಟ್ ಕೃತ್ಯ ಬೆಳಕಿಗೆ ಬರುತ್ತಲೇ ಡೆಲಿವರಿ ಆ್ಯಪ್ ಸಂಸ್ಥೆ ಕೂಡ ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಹೇಳಿದ್ದು, ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದೆ. ಅಲ್ಲದೆ ತನಿಖೆಗೆ ಸಹಕರಿಸುವುದಾಗಿ ಹೇಳಿದೆ ಎನ್ನಲಾಗಿದೆ.