ಬೆಂಗಳೂರು: ರಾಜ್ಯದ ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ನ್ನು ಕಡಿಮೆ ಮಾಡುವ ಉದ್ದೇಶದಿಂದ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ಸರ್ಕಾರಿ ಶಾಲೆಗಳಲ್ಲಿ 13 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಗಳನ್ನು ಒದಗಿಸಲು ಖಾಸಗಿ ಹೂಡಿಕೆದಾರರು ಮತ್ತು ವೈದ್ಯರೊಂದಿಗೆ ಚರ್ಚೆ ನಡೆಸುತ್ತಿದೆ.
RGUHS ನ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ಈ ಲಸಿಕೆಗಳ ಮಿತಿಯ ಬೆಲೆ ನಿರ್ಧರಿಸಲು, ಲಸಿಕೆಯ ಬ್ರ್ಯಾಂಡ್ ಮತ್ತು ಅದರಲ್ಲಿರುವ ಅಂಶಗಳೇನೇನು ಎಂದು ನಿರ್ಧರಿಸಲು ಒಂದು ವಾರ ತೆಗೆದುಕೊಳ್ಳಬಹುದು. ವಿವಿಧ ಬ್ರಾಂಡ್‌ಗಳ ಲಸಿಕೆಗಳು 2,000 ರಿಂದ 5,000 ರೂಪಾಯಿಗಳವರೆಗೆ ವಿಭಿನ್ನ ಬೆಲೆ ಶ್ರೇಣಿಗಳನ್ನು ಹೊಂದಿವೆ. ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೊದಲು ತಾಯಂದಿರನ್ನು ಪರೀಕ್ಷಿಸಲು ವಿವಿಧ ಸ್ಕ್ರೀನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಸುತ್ತೋಲೆ ಬಿಡುಗಡೆ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಹಾಕುವ ಕುರಿತು RGUHS ನಿಂದ ಒಂದು ವಾರದಲ್ಲಿ ಸುತ್ತೋಲೆ ಬಿಡುಗಡೆಯಾಗಲಿದೆ. ಈ ರೋಗದ ಬಗ್ಗೆ ಅಭಿಯಾನಗಳು, ಶಾಲೆಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಜಾಗೃತಿ ಮೂಡಿಸುವುದನ್ನು ರಾಜ್ಯಾದ್ಯಂತ ವೈದ್ಯರು ಮಾಡುತ್ತಾರೆ. ಲಸಿಕೆ ಹಾಕುವ ಮೊದಲು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಇದು ಒಳ್ಳೆಯ ಉಪಕ್ರಮ ಆದರೆ ಇದರ ಅನುಷ್ಠಾನವನ್ನು ತ್ವರಿತಗೊಳಿಸಬೇಕು. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿದ್ದು, ಶೇಕಡಾ 25ರಷ್ಟು ಭಾರತದಲ್ಲಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ವರ್ಷಕ್ಕೆ ಸುಮಾರು 75,000 ಮಹಿಳೆಯರು ಮೃತಪಡುತ್ತಿದ್ದಾರೆ. ಅವುಗಳನ್ನು ಮುಂದುವರಿದ ಹಂತದಲ್ಲಿ ಪತ್ತೆ ಮಾಡಲಾಗುತ್ತದೆ. ಆರಂಭ ಹಂತದಲ್ಲಿ ಪತ್ತೆಹಚ್ಚಿದರೆ ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಸ್ತ್ರೀರೋಗ ತಜ್ಞೆ ಮತ್ತು HDR ಆರೋಗ್ಯ ರಕ್ಷಣಾ ಪ್ರತಿಷ್ಠಾನದ ನಿರ್ದೇಶಕಿ ಡಾ. ಹೇಮಾ ದಿವಾಕರ್ ಹೇಳುತ್ತಾರೆ.
ಹೆಣ್ಣುಮಕ್ಕಳಿಗೆ ಲಸಿಕೆ ಹಾಕುವಾಗ ಪರೀಕ್ಷಿಸಬೇಕಾದ ಅಂಶಗಳಿವೆಯೇ ಎಂದು ಕೇಳಿದಾಗ, ಇದು ಪೋಲಿಯೊದಂತಹ ಸಾರ್ವತ್ರಿಕ ರೋಗನಿರೋಧಕ ಶಕ್ತಿಯಾಗಿದ್ದು, 9 ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಲಸಿಕೆ ಪಡೆಯಲು ಉತ್ತಮ ಸಮಯ. ಈ ಅಭಿಯಾನದ ಸಮಯದಲ್ಲಿ HPV ನ್ನು ಪತ್ತೆಹಚ್ಚಲು ತಾಯಂದಿರನ್ನು ಪರೀಕ್ಷಿಸಲಾಗುತ್ತದೆ.
ನಮ್ಮ ಅಭಿಯಾನಗಳಲ್ಲಿ ತಾಯಂದಿರನ್ನು ಪರೀಕ್ಷಿಸುವುದು ಮತ್ತು ಅವರ ಹೆಣ್ಣುಮಕ್ಕಳಿಗೆ ಲಸಿಕೆ ಹಾಕುವುದು ಸೇರಿದೆ. ಭಾರತದಲ್ಲಿ ಹೆಣ್ಣುಮಕ್ಕಳಿಗೆ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ, ಎರಡನೇ ಡೋಸ್ ನ್ನು ಮೊದಲ ಡೋಸ್‌ನ ಆರು ತಿಂಗಳ ಅವಧಿಯಲ್ಲಿ ನೀಡಲಾಗುತ್ತದೆ. ಮಕ್ಕಳಿಗೆ ಲಸಿಕೆ ಹಾಕಿದರೆ ಅವರಿಗೆ ಗರ್ಭಕಂಠದ ಕ್ಯಾನ್ಸರ್ ಬಾಧಿಸುವುದಿಲ್ಲ. 2030 ರ ವೇಳೆಗೆ ಅದನ್ನು ನಿರ್ಮೂಲನೆ ಮಾಡಬಹುದು ಎಂದರು.
ಈ ಅಭಿಯಾನಗಳ ಸಮಯದಲ್ಲಿ ತಾಯಂದಿರನ್ನು ಪರೀಕ್ಷಿಸುವುದರಿಂದ ಗರ್ಭಕಂಠದಲ್ಲಿ HPV ವೈರಸ್ ಇರುವಿಕೆಯ ಅವಧಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಯಾವುದೇ ಕ್ಯಾನ್ಸರ್ ಪೂರ್ವಭಾವಿ ಕೋಶಗಳಿವೆಯೇ ಮತ್ತು ಮುಂದಿನ ಚಿಕಿತ್ಸೆಯ ವಿಧಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು ಡಾ. ಹೇಮಾ ಹೇಳಿದರು.
ಡಾ. ಹೇಮಾ ಮತ್ತು ಸ್ತ್ರೀರೋಗತಜ್ಞರ ತಂಡವು ರಾಜ್ಯಾದ್ಯಂತ ವೈದ್ಯರಿಗೆ ತರಬೇತಿ ನೀಡಿದೆ. ಮೈಸೂರು, ಬೆಂಗಳೂರು, ಹಾಸನ, ಬೀದರ್ ಮತ್ತು ಕಲಬುರಗಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 7,000 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಲಸಿಕೆ ಹಾಕಿದೆ.
ನಾವು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಧಾರ್ಮಿಕ ಮುಖಂಡರು ಅಥವಾ ನಿರ್ದಿಷ್ಟ ಪ್ರದೇಶ, ಜಿಲ್ಲೆ ಅಥವಾ ತಾಲ್ಲೂಕಿನ ರಾಜಕಾರಣಿಗಳು ಸೇರಿದಂತೆ ನಾಲ್ಕು ಹಂತದ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೊದಲು ನಾವು ಪೋಷಕರ ಒಪ್ಪಿಗೆಯನ್ನು ಪಡೆಯುತ್ತೇವೆ. ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ 500 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಉಳಿದ ಮೊತ್ತವನ್ನು ನಾವು ಭರಿಸುತ್ತೇವೆ ಎಂದರು.