ಬೆಂಗಳೂರು: ಮೆಟ್ರೊ ರೈಲು ಕೆಟ್ಟು ನಿಂತು ಚಲ್ಲಘಟ್ಟದಿಂದ ವೈಟ್ ಫೀಲ್ಡ್ಗೆ ಸಂಚರಿಸುವ ನೇರಳೆ ಮಾರ್ಗದಲ್ಲಿ ಇಂದು ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯವಾಗಿದೆ. ಚಲ್ಲಘಟ್ಟದಿಂದ ಹಾಗೂ ವೈಟ್ಫೀಲ್ಡ್ನಿಂದ ಹೊರಟ ಮೆಟ್ರೋ ರೈಲುಗಳು ಅವು ನಿಂತಿದ್ದ ನಿಲ್ದಾಣಗಳಲ್ಲಿಯೇ ಸುಮಾರು 10 ನಿಮಿಷಗಳಿಗೂ ಹೆಚ್ಚು ಸಮಯ ನಿಂತು ನಂತರ ಪ್ರಯಾಣ ಆರಂಭಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು, ವಿಳಂಬಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಮಾಹಿತಿ ಸಿಕ್ಕ ತಕ್ಷಣ ತಿಳಿಸುತ್ತೇವೆ ಎಂದು ಮೆಟ್ರೋ ರೈಲಿನಲ್ಲಿ ಅನೌನ್ಸ್ ಮಾಡಲಾಗಿದೆ. ಸದ್ಯ ಮೆಟ್ರೋ ರೈಲು ಸಂಚಾರ ಶುರುವಾಗಿದ್ದು, ವಿಳಂಬವಾಗಿ ಸಂಚರಿಸುತ್ತಿದೆ.
ಮೆಟ್ರೋ ರೈಲು ಸಂಚಾರ ವ್ಯತ್ಯಯಕ್ಕೆ ಕಾರಣವೇನು? ಬಿಎಂಆರ್ಸಿಎಲ್ ಹೇಳಿದ್ದೇನು?
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ರೈಲು ಸಂಚಾರ ವಿಳಂಬವಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಚಲ್ಲಘಟ್ಟ-ವೈಟ್ ಫೀಲ್ಡ್ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ವಿಜಯನಗರ -ಹೊಸಹಳ್ಳಿ ನಿಲ್ದಾಣಗಳ ನಡುವೆ ವ್ಯತ್ಯಯವಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ರೈಲೊಂದು ಕೆಟ್ಟು ನಿಂತಿದ್ದೇ ಇದಕ್ಕೆ ಕಾರಣ. ಕೆಟ್ಟುನಿಂತ ರೈಲನ್ನು ಚಲ್ಲಘಟ್ಟ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆನಂತರ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.