

ಲಾಸ್ ಏಂಜಲೀಸ್: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ನ್ಯಾರೇಶನ್ ಮತ್ತು ಸ್ಟೋರಿಟೆಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಮೊದಲ ಗ್ರ್ಯಾಮಿ ಅವಾರ್ಡ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
68ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈಲಾಮಾ ಅವರ Meditations: The Reflections of His Holiness the Dalai Lama ಎಂಬ ಸ್ಪೋಕನ್-ವರ್ಡ್ ಆಡಿಯೋಬುಕ್‌ಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
ಸ್ಪೋಕನ್-ವರ್ಡ್ ವಿಭಾಗದಲ್ಲಿ ನೀಡಲಾದ ಈ ಪ್ರಶಸ್ತಿಯನ್ನು ದಲೈ ಲಾಮಾ ಅವರ ಜೀವನ ಮತ್ತು ಸಂದೇಶಗಳಿಗೆ ದೊರೆತ ಮಹತ್ವದ ಅಂತರರಾಷ್ಟ್ರೀಯ ಮಾನ್ಯತೆಯೆಂದು ಪರಿಗಣಿಸಲಾಗಿದೆ.
ಈ ವಿಭಾಗದಲ್ಲಿ ದಲೈಲಾಮಾ ಅವರು ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆಟಾಂಜಿ ಬ್ರೌನ್ ಜಾಕ್ಸನ್ (Lovely One: A Memoir), ಹಾಸ್ಯನಟ ಟ್ರೆವರ್ ನೋಹ್ (Into The Uncut Grass), ನಟಿ ಕ್ಯಾಥಿ ಗಾರ್ವರ್ (Elvis, Rocky & Me: The Carol Connors Story) ಹಾಗೂ ಫ್ಯಾಬ್ ಮೋರವನ್ (You Know It’s True: The Real Story of Milli Vanilli) ಸೇರಿದಂತೆ ಹಲವು ಪ್ರಮುಖನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಲೈ ಲಾಮಾ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಅವರ ಪರವಾಗಿ ಗಾಯಕ-ಗೀತರಚನೆಕಾರ ರೂಫಸ್ ವೈನ್‌ರೈಟ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಆಡಿಯೋ ಆಲ್ಬಮ್‌ನಲ್ಲಿ ದಲೈ ಲಾಮಾ ಅವರು ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಹಾಗೂ ಅವರ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಆಯಾನ್ ಅಲಿ ಬಂಗಾಶ್ ಅವರೊಂದಿಗೆ ಸಹಕಾರ ನೀಡಿದ್ದಾರೆ.
ಸಂಗೀತ ಮತ್ತು ಧ್ವನಿಪಠನದ ಸಂಯೋಜನೆಯ ಮೂಲಕ ಶಾಂತಿ, ಕರುಣೆ, ದಯೆ, ಭರವಸೆ ಹಾಗೂ ಮಾನವೀಯ ಏಕತೆ ಎಂಬ ಸಾರ್ವತ್ರಿಕ ಮೌಲ್ಯಗಳನ್ನು ಈ ಕೃತಿ ಸಾರುತ್ತದೆ.
ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ದಲೈಲಾಮಾ ಅವರು, ಈ ಗೌರವವನ್ನು ನಾನು ಕೃತಜ್ಞತೆ ಮತ್ತು ವಿನಯದೊಂದಿಗೆ ಸ್ವೀಕರಿಸುತ್ತೇನೆ. ಇದನ್ನು ವೈಯಕ್ತಿಕ ಸಾಧನೆಯಾಗಿ ನೋಡದೆ, ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯ ಮಾನ್ಯತೆಯಾಗಿ ನೋಡುತ್ತೇನೆ. ಶಾಂತಿ, ಕರುಣೆ, ಪರಿಸರದ ಕಾಳಜಿ ಹಾಗೂ ಮಾನವಕುಲದ ಏಕತೆಯ ಅರಿವು ಜನರ ಕಲ್ಯಾಣಕ್ಕೆ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಈ ಗ್ರ್ಯಾಮಿ ಪ್ರಶಸ್ತಿಯು ಈ ಸಂದೇಶಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ದಲೈ ಲಾಮಾ ಜೊತೆಗೆ K-POP ಕೂಡ ತನ್ನ ಮೊದಲ ಗ್ರ್ಯಾಮಿ ಗೆದ್ದು ಇತಿಹಾಸದಲ್ಲಿ ಹೆಸರು ದಾಖಲಿಸಿದೆ.
Advertisement