ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟ ಮನಕಲಕುವ ಘಟನೆ ನಡೆದಿದೆ.
ಜೀವನೋಪಾಯಕ್ಕೆ ಪೌರೋಹಿತ್ಯ ಮಾಡಿಕೊಂಡಿದ್ದ ಬ್ರಾಹ್ಮಣ ಸಮುದಾಯದ ಕುಮಾರಪ್ಪ ಎಂಬವರ ಕುಟುಂಬ ದಾರುಣ ಅಂತ್ಯ ಕಂಡಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಆಗಿದ್ದೇನು?
60 ವರ್ಷ ವಯಸ್ಸಿನ ಕುಮಾರಪ್ಪ, ಅವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ನಿನ್ನೆ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ.
ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಮೃತಪಟ್ಟಿದ್ದಾರೆ. ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಸಾಲ ಬಾಧೆಯಿಂದ ಸಾಮೂಹಿಕ ಆತ್ಮಹತ್ಯೆ ನಿರ್ಧಾರ ಶಂಕೆ
ಮನೆಯ ಹಾಲ್‌ನಲ್ಲಿ ಮದ್ಯದ ಬಾಟಲಿ ಮತ್ತು ಕ್ರಿಮಿನಾಶಕಗಳ ಬಾಟಲಿಗಳು ಪತ್ತೆಯಾಗಿವೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.