ಕಾರವಾರ: ಮಹಿಳಾ ಪತ್ರಕರ್ತೆಯೋರ್ವರ ಪ್ರಶ್ನೆಗೆ ಉಡಾಫೆಯ ಉತ್ತರ ನೀಡುವ ಮೂಲಕ, ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಹಳಿಯಾಳ ಶಾಸಕ ಆರ್‌ವಿ ದೇಶಪಾಂಡೆ ಭಾರೀ ವಿವಾದ ಸೃಷ್ಟಿಸಿದ್ದಾರೆ.
ಹೌದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ವಿಷಯವಾಗಿ ಪತ್ರಕರ್ತೆಯೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಜನರ ಪರಿಸ್ಥಿತಿ ಗಮನ ಹರಿಸಿ, ನಿಮ್ಮ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿಮ್ಮ ಅವಧಿಯಲ್ಲಿ ಆಗುತ್ತಾ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಶಾಸಕ ಆರ್.ವಿ.ದೇಶಪಾಂಡೆ 'ನಿಂದೇನಾದ್ರೂ ಹೆರಿಗೆ ಮಾಡಿಸಬೇಕಾ ಹೇಳು.. ಮಾಡಿಸ್ತೀನಿ' ಎಂದು ಅವಹೇಳನಕಾರಿ ಹೇಳಿಕೆ ನೀಡಿ, ಅಪಮಾನ ಮಾಡಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಯಾವಾಗ ಅದನ್ನು ಕಟ್ಟಿಸುತ್ತೀರಾ ಎಂದು ಕೇಳಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕರು ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಜನಪ್ರತಿನಿಧಿಗಳಾಗಿ ಈ ಮಾತನ್ನು ಹೇಳಿದ್ದಾರೆ. ಕೇಳಿದಂತ ಪ್ರಶ್ನೆಗೆ ಉತ್ತರ ಕೊಡದೇ ಮಹಿಳೆಗೆ ಈ ರೀತಿಯಾಗಿ ಆರ್.ವಿ.ದೇಶಪಾಂಡೆ ಅವರು ಮಾತನಾಡಿದ್ದಾರೆ.
ನಮ್ಮದೆಲ್ಲಾ ಆಗಿದೆ, ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಿ ಎಂದಾಗ ಸರಿ ಆಯ್ತು ಆಯ್ತು ಎಂದು ದೇಶಪಾಂಡೆ ಹೊರಟಿದ್ದಾರೆ. ಇನ್ನೂ ದೇಶಪಾಂಡೆ ಅವರ ವರ್ತನೆಗೆ ವ್ಯಾಪಕ ಆಕ್ರೋಶ ವಾಗಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್ ದೇಶಪಾಂಡೆ ಅವರೇ ನಿಮ್ಮದು ಅದೆಂತಹ ಕೀಳು ಮನಸ್ಥಿತಿ ?
ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಿಕೊಡಿ ಅಂತ ಪ್ರಶ್ನೆಮಾಡಿದ ಹಿರಿಯ ಪತ್ರಕರ್ತೆಗೆ "ನಿನ್ನ ಹೆರಿಗೆಯಾಗಲಿ" ಎನ್ನುವುದು, ನೀವು ಸ್ತ್ರೀಯರಿಗೆ ಕೊಡುವ ಗೌರವವೇ ? ಹಿರಿಯ ಶಾಸಕರಾಗಿರುವ ದೇಶಪಾಂಡೆ ಅವರೇ, ನಿಮ್ಮ ಈ ಉದ್ಧಟತನ ಮಾತುಗಳು ಮಹಿಳೆಯರ ಕುಲಕ್ಕೆ ಮಾಡಿರುವ ಅಪಮಾನ. ಈ ಕೂಡಲೇ ಆ ಮಹಿಳಾ ಪತ್ರಕರ್ತೆಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದೆ.
ಆರ್‌ವಿ ದೇಶಪಾಂಡೆ ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಏಕೆಂದರೆ ಅವರು ಇಂತಹ ಅಸಂಬದ್ಧ ಹೇಳಿಕೆ ನೀಡುವುದನ್ನು ನಾನು ಎಂದಿಗೂ ಕೇಳಿರಲಿಲ್ಲ. ನಾನು ಆರ್‌ವಿ ದೇಶಪಾಂಡೆ ಅವರನ್ನು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದು, ಈ ಬಗ್ಗೆ ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪತ್ರಕರ್ತೆ ರಾಧಾ ಹೀರೇಗೌಡರ್ ಸ್ಷಷ್ಟಪಡಿಸಿದ್ದಾರೆ.