ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಬಂಧಿಸಿದ ನಂತರ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ತಮ್ಮ ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ಹಲವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 60 ಪ್ರಕರಣಗಳನ್ನು ಹಿಂಪಡೆಯಲು ಅನುಮೋದನೆ ನೀಡಲಾಗಿದೆ.
ಸಂಪುಟವು ಹಿಂತೆಗೆದುಕೊಳ್ಳಲು ನಿರ್ಧರಿಸಿರುವ ಪ್ರಕರಣಗಳಲ್ಲಿ 2019ರ ಚಿತ್ತಾಪುರದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಮತ್ತು 2019ರಲ್ಲಿ ಜಾರಿ ನಿರ್ದೇಶನಾಲಯ (ED) ಬಂಧಿಸಿದ ನಂತರ ಕನಕಪುರದಲ್ಲಿ ಬಸ್ಸುಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಡಿಕೆ ಶಿವಕುಮಾರ್ ಅವರ ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸೇರಿವೆ. ಆಗ ಶಿವಕುಮಾರ್ ಶಾಸಕರಾಗಿದ್ದರು.
'ಹಲವಾರು ಪ್ರಕರಣಗಳನ್ನು ಹಿಂಪಡೆಯಲಾಗಿದೆ. ನಾವು ಬಿಜೆಪಿ, ಕಾಂಗ್ರೆಸ್ ಜನರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ನನ್ನನ್ನು ಇ.ಡಿ ಬಂಧಿಸಿದಾಗ, ಬಿಜೆಪಿ ಉದ್ದೇಶಪೂರ್ವಕವಾಗಿ ನಮ್ಮ ಕಾರ್ಯಕರ್ತರ ವಿರುದ್ಧ ಕೆಲವು ಪ್ರಕರಣಗಳನ್ನು ದಾಖಲಿಸಿತ್ತು. ಈ ಹಿಂದೆ, ಕೋವಿಡ್ ಸಮಯದಲ್ಲಿ ಆಗಿನ ಬಿಜೆಪಿ ಸರ್ಕಾರ ನನ್ನ ವಿರುದ್ಧ ಮತ್ತು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಗ ಸಚಿವರಾಗಿರುವ ನಮ್ಮ ಹಲವಾರು ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿತ್ತು. ನಾವು ಸುಮ್ಮನೆ ಕುಳಿತುಕೊಳ್ಳಬೇಕೇ?' ಎಂದು ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 'ರೈತರು, ಭಾಷೆ ಮತ್ತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ವಿರುದ್ಧದ ಹಲವಾರು ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದೊಂದೇ ಪ್ರಕರಣವಲ್ಲ, ನಮ್ಮ ಸರ್ಕಾರ ಎಲ್ಲ ಪಕ್ಷಗಳಿಗೆ ಸೇರಿದ ಜನರ ವಿರುದ್ಧದ ನೂರಾರು ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ. ಬಿಜೆಪಿ ಕೋರಿಕೆ ಮೇರೆಗೆ ನಾವು ಪ್ರಕರಣಗಳನ್ನು ಹಿಂತೆಗೆದುಕೊಂಡಿದ್ದೇವೆ. ರೈತ ಸಂಘ ಮತ್ತು ಕಾರ್ಯಕರ್ತರ ವಿರುದ್ಧವೂ ಸಹ ಪ್ರಕರಣಗಳನ್ನು ಹಿಂಪಡೆಯಲಾಗಿದೆ' ಎಂದು ಅವರು ಹೇಳಿದರು.
ತಮ್ಮನ್ನು ಬಂಧಿಸಿದ ಇ.ಡಿ ಪ್ರಕರಣವನ್ನು ನ್ಯಾಯಾಲಯಗಳು ವಜಾಗೊಳಿಸಿವೆ. ನಾನು ಬಂಧಿಸಲ್ಪಟ್ಟಾಗ ನನ್ನ ವಿರುದ್ಧ ಮಾತನಾಡಿದವರು ಮತ್ತು ನಾನು (ಜಾಮೀನಿನ ಮೇಲೆ) ಹೊರಬಂದಾಗ ನನಗೆ ದೊರೆತ ಸ್ವಾಗತದ ಬಗ್ಗೆ ಮಾತನಾಡಿದವರು, ಪ್ರಕರಣ ವಜಾಗೊಂಡಾಗ ಏಕೆ ಮಾತನಾಡಲಿಲ್ಲ? ಈಗ ಏಕೆ (ಈ ಪ್ರಕರಣಗಳನ್ನು ಹಿಂತೆಗೆದುಕೊಂಡಾಗ)? ಆ ಎಲ್ಲಾ ವಿಷಯಗಳನ್ನು ಈಗ ಚರ್ಚಿಸುವುದು ಬೇಡ' ಎಂದು ಹೇಳಿದರು.