ಬೆಂಗಳೂರು: ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು, ಹಾಸ್ಟೆಲ್ ವಾರ್ಡನ್ ದೇವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಹಾಸ್ಟೆಲ್ ನಲ್ಲಿ ವಾಸ್ತವಿಕ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದಾರೆಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಲಾಗಿದ್ದು, ಹಣ ಮತ್ತು ಸೌಲಭ್ಯಗಳು ಕಸಿದುಕೊಂಡಿರುವುದು ಬೆಳಕಿಗೆ ಬಂದಿದೆ.
ಆಗಸ್ಟ್ 28 ರಂದು ರಾತ್ರಿ 8 ಗಂಟೆ ವೇಳೆಗೆ ಭಾರೀ ಮಳೆಯ ನಡುವೆಯೂ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹಾಸ್ಟೆಲ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಈ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು.
ಬಯೋ-ಮೆಟ್ರಿಕ್ ಹಾಜರಾತಿಯ ಪ್ರಕಾರ ಹಾಸ್ಟೆಲ್ ನಲ್ಲಿ ಕೇವಲ 159 ವಿದ್ಯಾರ್ಥಿಗಳು ಮಾತ್ರ ಇರುವುದು ಕಂಡುಬಂದಿತ್ತು. ಆದರೆ, ಹಾಜರಾತಿ ನೋಂದಣಿಯಲ್ಲಿ 427 ವಿದ್ಯಾರ್ಥಿಗಳಿರುವುದು ಪತ್ತೆಯಾಗಿತ್ತು.
ಆಹಾರಕ್ಕಾಗಿಯೇ ಇಲಾಖೆಯು ಪ್ರತಿ ಮೆಟ್ರಿಕ್ ನಂತರದ ವಿದ್ಯಾರ್ಥಿಗೆ ಮಾಸಿಕ 1,850 ರೂ. ಮತ್ತು ಪ್ರತಿ ಪ್ರಿ-ಮೆಟ್ರಿಕ್ ವಿದ್ಯಾರ್ಥಿಗೆ 1,750 ರೂ. ಖರ್ಚು ಮಾಡುತ್ತಿದೆ. ಇದಲ್ಲದೆ, ಸರ್ಕಾರವು ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಿಗೆ ಇತರ ಸೌಲಭ್ಯಗಳಿಗೂ ಹಣ ನೀಡುತ್ತಿದೆ.
ಹೀಗಾಗಿ ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ತೋರಿಸಿ, ಸರ್ಕಾರದ ಹಣ ದುರ್ಬಳಕೆ ಮಾಡುತ್ತಿರುವುದು ಪತ್ತೆಯಾಗಿತ್ತು.
ಹಾಸ್ಟೆಲ್'ನ ಅಸಮರ್ಪಕ ನಿರ್ವಹಣೆ, ಸೌಲಭ್ಯಗಳು ಮತ್ತು ಕಳಪೆ ಆಹಾರದ ವಿರುದ್ಧ ಧ್ವನಿ ಎತ್ತಿದಾಗಲೆಲ್ಲಾ ವಾರ್ಡನ್ ಗೂಂಡಾಗಳ ಕಳುಹಿಸಿ, ಥಳಿಸುತ್ತಿದ್ದ ಎಂದು ವಿದ್ಯಾರ್ಥಿಗಳು ಉಪ ಲೋಕಾಯುಕ್ತರಿಗೆ ತಿಳಿಸಿದ್ದಾರೆ.
ಇದಲ್ಲದೆ, ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ, ಹಾಸಿಗೆ, ಬೆಡ್‌ಶೀಟ್, ದಿಂಬು, ಸೊಳ್ಳೆ ಪರದೆ, ಟ್ರ್ಯಾಕ್‌ಸೂಟ್, ಪುಸ್ತಕಗಳು ಇತ್ಯಾದಿಗಳನ್ನು ಒದಗಿಸದಿರುವುದು ಪತ್ತೆಯಾಗಿತ್ತು. ಅಲ್ಲದೆ, ಉಪ ಲೋಕಾಯುಕ್ತರು ಭೇಟಿ ನೀಡುವ ವಿಚಾರ ತಿಳಿದ ದಿನ ಮಾತ್ರ ಉತ್ತಮ ರೀತಿಯಲ್ಲಿ ಆಹಾರ ನೀಡಲಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಆರೋಪ ಹಾಗೂ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿಗೆ ಆಗಾಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡುವಂತೆ ಹಾಗೂ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದ್ದರು.
ಇದರಂತೆ ರಾಯಚೂರಿನ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂಡೂ ಅವರು ಇಲಾಖಾ ವಿಚಾರಣೆಗೆ ಬಾಕಿ ಇರುವ ಕಾರಣ ಹಾಸ್ಟೆಲ್ ವಾರ್ಡನ್ ದೇವರಾಜ್ ಅವರನ್ನು ಅಮಾನತುಗೊಳಿಸಿದ್ದಾರೆ.
2013 ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಎಲ್ಲಾ ಜಿಲ್ಲೆಗಳಲ್ಲಿರುವ ಹಾಸ್ಟೆಲ್‌ಗಳಿಗೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ನಿರ್ದೇಶಿಸಿದ್ದು, ಮಂಜೂರಾದ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ, ಆಹಾರ, ಶಿಕ್ಷಣ ಮತ್ತು ವಸತಿ ಕೊರತೆಯಿಂದಾಗಿ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅವರನ್ನು ಬಾಡಿಗೆ ಕಟ್ಟಡಗಳಲ್ಲಿ ಇರಿಸಬಹುದು ಎಂದು ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಇಲಾಖೆಯ ಈ ಸೂಚನೆಯನ್ನೇ ಕೆಲವರು ತಮ್ಮ ಬಂಡವಾಳ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಿ, ಅಕ್ರಮ ಎಸಗುತ್ತಿದ್ದಾರೆನ್ನಲಾಗಿದೆ.
ಈ ನಡುವೆ ಪರಿಶೀಲನೆ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು, ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳ ಉತ್ತೀರ್ಣ ಶೇಕಡಾವಾರು ಪ್ರಮಾಣದಲ್ಲೂ ವ್ಯತ್ಯಾಸಗಳಿರುವುದನ್ನು ಪತ್ತೆ ಮಾಡಿದ್ದು, ಈ ಹಿನ್ನೆಲೆಯಲ್ಲಿ, ಭ್ರಷ್ಟಾಚಾರದ ಪ್ರಮಾಣವನ್ನು ಪರಿಶೀಲಿಸಲು ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ಹಾಸ್ಟೆಲ್‌ಗಳಲ್ಲಿ ಇರಿಸಲಾಗಿರುವ ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.