ಬೆಂಗಳೂರು: ಜಿಎಸ್ ಟಿ ದರ ಇಳಿಕೆಗೆ ರಾಜ್ಯ ಸರ್ಕಾರಗಳು ಸತತವಾಗಿ ಹೇರುತ್ತಾ ಬಂದಿರುವ ಒತ್ತಡ ಮುಖ್ಯ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಪ್ರಾರಂಭದಲ್ಲಿಯೇ ಮಾಡಿದ್ದರೆ ದೇಶದ ಜನತೆ ‘’ಗಬ್ಬರ್ ಸಿಂಗ್ ತೆರಿಗೆ” ವ್ಯವಸ್ಥೆಯಿಂದ ಪಡಬಾರದ ಕಷ್ಟಗಳನ್ನು ಪಡಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ತೆರಿಗೆದಾರ ಜನತೆ ಮತ್ತು ವ್ಯಾಪಾರಿ ವರ್ಗದ ಮೇಲಿನ ಆರ್ಥಿಕ ಭಾರ ಮತ್ತು ಅನುಷ್ಠಾನದ ಜಂಜಾಟವನ್ನು ತಗ್ಗಿಸಲು ಅತ್ಯಗತ್ಯವಾಗಿದ್ದ ತೆರಿಗೆ ಸುಧಾರಣೆಯನ್ನು ಜಾರಿಗೆ ತರುವ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಈಗ ಜಿ.ಎಸ್.ಟಿ ಸುಧಾರಣೆಯ ಲಾಭ ಬಳಕೆದಾರ ಜನತೆಗೆ ತಲುಪುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ)ಯ ಜವಾಬ್ದಾರಿಯಾಗಿದೆ. ಈ ತೆರಿಗೆ ಸುಧಾರಣೆಯನ್ನು ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಲಾಭಾಂಶವನ್ನು ಹೆಚ್ಚುಮಾಡಲು ದುರುಪಯೋಗ ಮಾಡದಂತೆ ತಡೆಯುವ ಹೊಣೆ ಕೂಡಾ ಕೇಂದ್ರ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.
ಈಗಿನ ಲೆಕ್ಕಾಚಾರದ ಪ್ರಕಾರ ಈಗಿನ ಜಿ.ಎಸ್.ಟಿ ಸುಧಾರಣೆಯಿಂದಾಗಿ ಕರ್ನಾಟಕ ಸರ್ಕಾರ ವಾರ್ಷಿಕ ₹15,000 ದಿಂದ ₹20,000 ಕೋಟಿಯಷ್ಟು ವರಮಾನವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿ.ಎಸ್.ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಜನತೆಯ ಖರೀದಿ ಸಾಮರ್ಥ್ಯದ ಹೆಚ್ಚಳ ಮತ್ತು ತೆರಿಗೆ ಪಾವತಿದಾರರ ಜಾಲದ ವಿಸ್ತರಣೆಯ ಮೂಲಕ ಆರ್ಥಿಕ ಅಭಿವೃದ್ದಿಯನ್ನು ಸಾಧಿಸಿ ಸರ್ವರಿಗೂ ಸಮೃದ್ದಿಯ ಪಾಲು ಸಿಗುವಂತೆ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.