ಬೆಂಗಳೂರು: ಪ್ರವಾಸಿ ವೀಸಾದಲ್ಲಿ ಆಗಮಿಸಿರುವ ವಿದೇಶಿ ಧರ್ಮಗುರುಗಳು ಧರ್ಮೋಪದೇಶ ಮಾಡಲು ಅಥವಾ ಧಾರ್ಮಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಮೀಲಾದ್-ಉನ್-ನಬಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ದೇಶಾದ್ಯಂತ ಸಾವಿರಾರು ಭಾಗವಹಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮಕ್ಕೆ ಯೆಮೆನ್‌ನ ಹಬೀಬ್ ಉಮರ್ ಬಿನ್ ಹಫೀಜ್ ಮತ್ತು ಮುಫ್ತಿ ಶೇಖ್ ಅಬುಬಕರ್ ಅಹ್ಮದ್ ಮುಸ್ಲಿಯಾರ್ ಸೇರಿದಂತೆ ಪ್ರಮುಖ ಇಸ್ಲಾಮಿಕ್ ಧರ್ಮಗುರುಗಳಿಗೆ ಆಹ್ವಾನ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಹಲವು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.
ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಸರ್ಕಾರದ ಆದೇಶವನ್ನು ಈಗಾಗಲೇ ಆಯೋಜಕರ ಗಮನಕ್ಕೆ ತರಲಾಗಿದೆ. ಪೊಲೀಸರು ಸೂಕ್ತ ಸೂಚನೆ ನೀಡಿದ್ದಾರೆ. ಯಾವುದೇ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯು ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತದೆ ಎಂದು ಹೇಳಿದ್ದಾರೆ.