ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಪತ್ರ ಬರೆದಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ʻಕೊಂದವರು ಯಾರು? Who Killed the Women in Dharmasthala?ʼ ಶೀರ್ಷಿಕೆಯಲ್ಲಿ ಪತ್ರ ಬರೆಯಲಾಗಿದ್ದು, ಎಸ್‌ಐಟಿ ತನಿಖೆಯ ಬೆಳವಣಿಗೆ ಬಗ್ಗೆ ಮಹಿಳಾ ಸಂಘಟನೆಗಳು ತೀವ್ರ ಆತಂಕ ಹೊರಹಾಕಿವೆ. ಅಲ್ಲದೇ ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ, ತನಿಖೆ ಕುರಿತ ಮಾಧ್ಯಮ ವರದಿಗಳು ಹಾಗೂ ಡಿಸಿಎಂ ಡಿಕೆಶಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಪತ್ರವು ,ಮನವಿ ರೂಪದ ಆಗ್ರಹವಾಗಿದೆ. ಪ್ರಮುಖವಾಗಿ ವೇದವಲ್ಲಿ ಪ್ರಕರಣ, ಸೌಜನ್ಯ ಪ್ರಕರಣ ಹಾಗೂ ಪದ್ಮಲತಾ ಸಾವಿನ ತನಿಖೆ ಆಗಬೇಕು. ಇವರನ್ನು ಕೊಂದವರು ಯಾರು ಎಂಬ ಕಾಂಪೈನ್ ಮಾಡಲಾಗುತ್ತಿದೆ
ಎಸ್ ಐಟಿ ತನಿಖೆ ಜಾರಿಯಲ್ಲಿರುವಾಗಲೇ, ಧರ್ಮಸ್ಥಳ ಪ್ರಕರಣ ಷಡ್ಯಂತ್ರ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿರುವುದು ಆತಂಕಕಾರಿ ಬೆಳವಣಿಗೆ, ಇದಕ್ಕೆ ಮಹಿಳಾ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಸಚಿವ ಪರಮೇಶ್ವರ್ ಕೂಡಾ ಬೆಂಬಲ ಕೊಟ್ಟಿರುವುದು ಸರಿಯಲ್ಲ. ಹೀಗಾಗಿ ಎಸ್‌ಐಟಿ ನ್ಯಾಯ ಸಮ್ಮತ ತನಿಖೆ ನಡೆಸಲು ಸರ್ಕಾರ ಸಹಕಾರ ಕೊಡಬೇಕು, ಸೌಜನ್ಯಾ ಪ್ರಕರಣವೂ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದು ಪತ್ರ ಬರೆದಿದ್ದಾರೆ.
ಅಲ್ಲದೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ನಡೆದ 200 ಕ್ಕೂ ಹೆಚ್ಚು ಅನಧಿಕೃತ ಸಾವಿನ ಬಗ್ಗೆ ಇರುವ ವಿ ಎಸ್ ಉಗ್ರಪ್ಪ ಸಮಿತಿ ಕೊಟ್ಟ ವರದಿಯನ್ನೂ ಸರಿಯಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಎಸ್‌ಐಟಿ ತನಿಖೆಯ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಒಕ್ಕೂಟ, ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ, ಮಾಧ್ಯಮಗಳ ವರದಿಗಳ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದೆ.
ಆರ್‌ಟಿಐ ದಾಖಲೆ ಅನ್ವಯ 2001-2012 ರ ನಡುವೆ ಉಜಿರೆ ಮತ್ತು ಧರ್ಮಸ್ಥಳದಲ್ಲಿ 424 ಸಾವುಗಳು ಸಂಭವಿಸಿವೆ. ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹಲವು ಸಾವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವುದಾಗಿ ಮಾಧ್ಯಮಗಳ ಮುಂದೆ ಬಂದಿದ್ದ, ಮಾಧ್ಯಮಗಳು ಹಾಗೂ ಕೆಲವು ರಾಜಕೀಯ ಮುಖಂಡರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಸುಜಾತಭಟ್ ಗೆ ರಕ್ಷಣೆ ಕೊಡಬೇಕಾಗಿತ್ತು ಕೊಟ್ಟಿಲ್ಲ ಎಂದು ಉಲ್ಲೇಖಿಸಲಾಗಿದೆ.