ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಮಂಗಳವಾರ ನಿರಾಕರಿಸಿದೆ. ಅಲ್ಲದೆ, ನನಗೆ ಸ್ವಲ್ಪ ವಿಷ ಕೊಡಿ ಎಂದಿದ್ದ ದರ್ಶನ್ ಅವರ ಕೆಲವು ಬೇಡಿಕೆಗಳನ್ನು ಈಡೇರಿಸಲು ಕೋರ್ಟ್ ಸಮ್ಮತಿಸಿದ್ದು, ರಿಲೀಫ್ ದೊರೆತಂತಾಗಿದೆ.
ಆರೋಪಿ ದರ್ಶನ್ ಅವರನ್ನು ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 64ನೇ ಸೆಷನ್ಸ್ ಕೋರ್ಟ್, ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಕಾರಣಗಳಿಲ್ಲ ಎಂದು ಹೇಳಿದೆ.
ವಿಚಾರಣೆ ವೇಳೆ ನನಗೆ ಸ್ವಲ್ಪ ವಿಷ ಕೊಡಿ, ಬಿಸಿಲು ನೋಡದೆ ಒಂದು ತಿಂಗಳಾಗಿದೆ. ಕೈಯೆಲ್ಲಾ ಫಂಗಸ್ ಬಂದಿದೆ ಎಂದು ನ್ಯಾಯಾಧೀಶರ ಮುಂದೆ ಅಸಹಾಯಕರಾಗಿ ಕೇಳಿಕೊಂಡರು. ಹಾಗೆಲ್ಲಾ ನೀವು ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ ಎಂದ ಕೋರ್ಟ್, ಆರೋಪಿ ದರ್ಶನ್ಗೆ ಜೈಲಿನ ಆವರಣದಲ್ಲಿ ಓಡಾಡಲು ಅನುಮತಿ ನೀಡಿದೆ.
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ದರ್ಶನ್ಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಲು ಆದೇಶಿಸಿದೆ. ಆದರೆ, ಜೈಲಿನ ಕೈಪಿಡಿ ಅನುಸರಿಸಬೇಕು ಎಂದು ನ್ಯಾಯಾಲಯ ಆರೋಪಿಗೆ ಸೂಚನೆ ನೀಡಿದೆ.
ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಬೇರೆ ಜೈಲಿಗೆ ಸ್ಥಳಾಂತರಿಸಲು ಐಜಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.